ಮೆಡ್ವೆಡೆವ್ ಅಂತಿಮ-16ರ ಸುತ್ತಿಗೆ ಪ್ರವೇಶ: ನವೊಮಿ ಒಸಾಕಾ ಕ್ವಾರ್ಟರ್ ಫೆನಲ್‌ಗೆ

Update: 2022-03-30 03:23 GMT

ಮಿಯಾಮಿ: ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನವೊಮಿ ಒಸಾಕಾ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ವಿಶ್ವದ ನಂ.1 ಸ್ಥಾನ ವಶಪಡಿಸಿಕೊಳ್ಳುವ ಅಂಚಿನಲ್ಲಿರುವ ರಶ್ಯದ ಆಟಗಾರ ಮೆಡ್ವೆಡೆವ್ ಸೋಮವಾರ 84 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸ್ಪೇನ್‌ನ ಪೆಡ್ರೊ ಮಾರ್ಟಿನೆಝ್‌ರನ್ನು 6-3, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.

ಮಿಯಾಮಿ ಓಪನ್‌ನಲ್ಲಿ ಮೆಡ್ವೆಡೆವ್ ಸೆಮಿ ಫೈನಲ್ ಹಂತಕ್ಕೆ ತಲುಪಿದರೆ ವಿಶ್ವದ ನಂ.1 ಸ್ಥಾನದಲ್ಲಿರುವ ನೊವಾಕ್ ಜೊಕೊವಿಕ್‌ರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಲಿದ್ದಾರೆ.

ಮೆಡ್ವೆಡೆವ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಜೆನ್ಸನ್ ಬ್ರೂಕ್ಸ್‌ಬೈ ಅವರನ್ನು ಎದುರಿಸಲಿದ್ದಾರೆ. ಬ್ರೂಕ್ಸ್‌ಬೈ ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಅಗುಟ್‌ರನ್ನು 6-3, 5-7, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಇದೇ ವೇಳೆ, ಅಮೆರಿಕದ ಅಲಿಸನ್ ರಿಸ್ಕೆ ಅವರನ್ನು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 6-3, 6-4 ನೇರ ಸೆಟ್‌ಗಳ ಅಂತರದಿಂದ ಸೋಲಿಸಿರುವ ಜಪಾನ್ ಆಟಗಾರ್ತಿ ಒಸಾಕಾ ಟೂರ್ನಿಯಲ್ಲಿ ಸತತ ಎರಡನೇ ವರ್ಷ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

 ನಾಲ್ಕು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಒಸಾಕಾ ಮುಂದಿನ ಸುತ್ತಿನಲ್ಲಿ 9ನೇ ಶ್ರೇಯಾಂಕದ ಆಸ್ಟ್ರೇಲಿಯನ್ ಓಪನ್ ಫೈನಲಿಸ್ಟ್ ಡೇನಿಯಲ್ ಕಾಲಿನ್ಸ್ ರನ್ನು ಎದುರಿಸಲಿದ್ದಾರೆ. ಕಾಲಿನ್ಸ್ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟ್ಯುನಿಶಿಯದ 8ನೇ ಶ್ರೇಯಾಂಕದ ಒನ್ಸ್ ಜಬೇರ್‌ರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News