ಐಪಿಎಲ್: ಆರ್‌ಸಿಬಿಗೆ 3 ವಿಕೆಟ್‌ಗಳ ಜಯ

Update: 2022-03-31 03:38 GMT
photo: twitter.com/IPL

ಮುಂಬೈ, ಮಾ. 30: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ಬುಧವಾರ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 3 ವಿಕೆಟ್‌ಗಳ ಜಯ ಸಾಧಿಸಿದೆ.

ಗೆಲ್ಲಲು 129 ರನ್‌ಗಳ ಗುರಿಯನ್ನು ಪಡೆದ ಬೆಂಗಳೂರು ತಂಡವು 19.2 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 132 ರನ್‌ಗಳನ್ನು ಗಳಿಸಿತು.

ಶರ್ಫೇನ್ ರುದರ್‌ಫೋರ್ಡ್ 28 ರನ್‌ಗಳನ್ನು ಗಳಿಸಿದರೆ, ಶಹಬಾಝ್ ಅಹ್ಮದ್ 27 ರನ್‌ಗಳನ್ನು ಗಳಿಸಿದರು. ಟಿಮ್ ಸೌತೀ 20 ರನ್‌ಗಲನ್ನು ನೀಡಿ 3 ವಿಕೆಟ್‌ಗಳನ್ನು ಗಳೀಸಿದರು.

 ಇದಕ್ಕೂ ಮೊದಲು ವನಿಂಡು ಹಸರಂಗ ಡಿಸಿಲ್ವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಕೆಕೆಆರ್ 18.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 128 ರನ್‌ಗಳನ್ನು ಗಳಿಸಿತು. ಹಸರಂಗ 4 ಓವರ್‌ಗಳಲ್ಲಿ 20 ರನ್‌ಗಳನ್ನು ನೀಡಿ ವಿಕೆಟ್‌ಗಳನ್ನು ಪಡೆದರು.

ಮುಂಬೈಯ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಬೆಂಗಳೂರು ತಂಡವು ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು.

ಆದರೆ, ಕೆಕೆಆರ್‌ನ ಅಗ್ರ ಕ್ರಮಾಂಕ ಸಂಪೂರ್ಣವಾಗಿ ವಿಫಲವಾಯಿತು. ಆ್ಯಂಡ್ರಿ ರಸೆಲ್ (18 ಎಸೆತಗಳಲ್ಲಿ 25 ರನ್) ತಂಡದ ಗರಿಷ್ಠ ಸ್ಕೋರ್‌ದಾರರಾದರು. ಆರಂಭಿಕರಾದ ಅಜಿಂಕ್ಯ ರಹಾನೆ (10 ಎಸೆತಗಳಲ್ಲಿ 9 ರನ್) ಮತ್ತು ವೆಂಕಟೇಶ್ ಅಯ್ಯರ್ (14 ಎಸೆತಗಳಲ್ಲಿ 10 ರನ್) ನಿರಾಶೆ ಮೂಡಿಸಿದರು. ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್‌ಗೂ (10 ಎಸೆತಗಳಲ್ಲಿ 13 ರನ್) ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ.

ಕೊನೆಯ ವಿಕೆಟ್‌ಗೆ ಉಮೇಶ್ ಯಾದವ್ (12 ಎಸೆಗಳಲ್ಲಿ 18 ರನ್) ಮತ್ತು ವರುಣ್ ಚಕ್ರವರ್ತಿ (16 ಎಸೆತಗಳಲ್ಲಿ 10 ರನ್ ಅಜೇಯ) ಸೇರಿಸಿದ 27 ರನ್‌ಗಳು ಇನಿಂಗ್ಸ್‌ನ ಪ್ರಮುಖ ಅಂಶವಾಗಿತ್ತು. ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ ವನಿಂಡು ಹಸರಂಗ ಡಿಸಿಲ್ವ ಬೆಂಗಳೂರು ತಂಡದ ಯಶಸ್ವಿ ಬೌಲರ್ ಆದರು. ಅದೇ ವೇಳೆ, ಆಕಾಶ ದೀಪ್ 45 ರನ್‌ಗಳನ್ನು ನೀಡಿ 3 ವಿಕೆಟ್‌ಗಳನ್ನು ಉರುಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News