ರಶ್ಯ ಸೇನೆಯಿಂದ 11 ಮೇಯರ್ ಗಳ ಅಪಹರಣ: ಉಕ್ರೇನ್ ಆರೋಪ

Update: 2022-04-03 18:25 GMT
photo courtesy:twitter/@AdamParkhomenko

ಕೀವ್, ಎ.3: ಉಕ್ರೇನ್ ನ 11 ಸ್ಥಳೀಯಾಡಳಿತ ಮುಖಂಡರನ್ನು ರಶ್ಯ ಸೇನೆ ಅಪಹರಿಸಿದ್ದು ಈ ಬಗ್ಗೆ ರೆಡ್‌ಕ್ರಾಸ್  ಅಂತರಾಷ್ಟ್ರೀಯ ಸಮಿತಿ, ವಿಶ್ವಸಂಸ್ಥೆ ಹಾಗೂ ಇತರ ಸಂಬಂಧಿತ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಉಕ್ರೇನ್‌ನ ಉಪಪ್ರಧಾನಿ ಇರಿನಾ ವೆರೆಸ್ಚುಕ್ ರವಿವಾರ ಹೇಳಿದ್ದಾರೆ. 

ಕೀವ್, ಖೆರ್ಸಾನ್, ಝಪೊರಿಝ್ಯ, ಮಿಕೊಲಿವ್ ಮತ್ತು ಡೊನೆಟ್ಸ್ಕ್‌ನ ಮೇಯರ್ಗಳನ್ನು ಅಪಹರಿಸಲಾಗಿದ್ದು ಈ ಮಾಹಿತಿಯನ್ನು ವಿಶ್ವಸಂಸ್ಥೆ, ರೆಡ್ ಕ್ರಾಸ್ ಸಹಿತ ಸಂಸ್ಥೆಗಳಿಗೆ ರವಾನಿಸಲಾಗಿದೆ. ತಮ್ಮ ಅಧಿಕಾರ ಬಳಸಿ ಅಪಹೃತರ ಸುರಕ್ಷಿತ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಸಂದೇಶ ಪೋಸ್ಟ್ ಮಾಡಿದ್ದಾರೆ.ಕೀವ್‌ನ ಪಶ್ಚಿಮದ ಗ್ರಾಮ ಮೊಟಿಜಿನ್‌ನ ಮುಖ್ಯಸ್ಥೆ ಒಲ್ಗಾ ಸುಖೆಂಕೊ ಮತ್ತವರ ಪತಿಯನ್ನು ಅಪಹರಿಸಿರುವ ರಶ್ಯ ಯೋಧರು ಬಳಿಕ ಇಬ್ಬರನ್ನೂ ಹತ್ಯೆ ಮಾಡಿದ್ದಾರೆ ಎಂದು ಇರಿನಾ ಹೇಳಿದ್ದಾರೆ.

ಆಕ್ರಮಿತ ಪ್ರದೇಶದಲ್ಲಿರುವ ಹಲವಾರು ಮೇಯರ್‌ಗಳನ್ನು ರಶ್ಯ ಯೋಧರು ಅಪಹರಿಸಿರುವುದು ಖಂಡನೀಯ ಎಂದು ಯುರೋಪಿಯನ್ ಯೂನಿಯನ್ ಹೇಳಿದೆ. ಈ ಮಧ್ಯೆ, ಆಕ್ರಮಿತ ಪ್ರದೇಶಗಳಾದ ಚೆರ್ನಿಗಿವ್, ಖಾರ್ಕಿವ್, ಕೀವ್ ನಗರಗಳಲ್ಲಿ ರಶ್ಯದ ಸೇನೆ ಯುದ್ಧಾಪರಾಧದಲ್ಲಿ ತೊಡಗಿರುವುದಕ್ಕೆ ಪುರಾವೆಯಿದೆ ಎಂದು ಮಾನವಹಕ್ಕು ನಿಗಾ ಸಮಿತಿ ರವಿವಾರ ಹೇಳಿದೆ. ನಿರಂತರ ಅತ್ಯಾಚಾರ, ವಿಚಾರಣೆಯಿಲ್ಲದೆ ಸಾಮೂಹಿಕ ಮರಣದಂಡನೆ ಮುಂತಾದ ಯುದ್ಧಾಪರಾಧದ ಜತೆಗೆ, ಆಹಾರ, ಬಟ್ಟೆ ಮತ್ತಿತರ ವಸ್ತುಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಸಮಿತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News