×
Ad

ವಿಶ್ವಕಪ್ : ಪತಿ, ಪತ್ನಿ ಇಬ್ಬರೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವಿಶೇಷ ದಾಖಲೆ

Update: 2022-04-04 00:20 IST
Photo: twitter/ICC

ಕ್ರೈಸ್ಟ್ ಚರ್ಚ್‌: ಆಸ್ಟ್ರೇಲಿಯನ್ ಮಹಿಳಾ ಕ್ರಿಕೆಟ್ ತಂಡವು ಭಾನುವಾರ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ನ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು 71 ರನ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆ ಮೂಲಕ ಏಳನೇ ಬಾರಿ ವರ್ಲ್ಡ್‌ ಕಪ್‌ ಟ್ರೋಫಿಯನ್ನು ಆಸ್ಟ್ರೇಲಿಯಾ ತಂಡ ಪಡೆದುಕೊಂಡಿದೆ.

ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ಅಮೋಘ ಪ್ರದರ್ಶನ ನೀಡಿದ್ದು 138 ಬಾಲ್‌ಗಳಲ್ಲಿ  170 ರನ್‌ ದಾಖಲಿಸಿದ್ದಾರೆ. ಈ ಶತಕದೊಂದಿಗೆ ಹೀಲಿ, ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿದ ವಿಶ್ವದ ಎರಡನೇ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಅಲ್ಲದೆ, ವಿಶ್ವಕಪ್‌ ಸರಣಿಯಲ್ಲಿ ಒಂದಕ್ಕಿಂತ ಹೆಚ್ಚು ಶತಕ ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಆಗಿದ್ದಾರೆ.

ಈ ಒಂದು ಪ್ರದರ್ಶನದ ಮೂಲಕವೇ ಅಲಿಸ್ಸಾ ಹಲವು ದಾಖಲೆಗಳನ್ನು ಸೃಷ್ಟಿಸಿದ್ದು, ನ್ಯೂಜಿಲೆಂಡ್‌ ತಂಡದ ರಾಚೆಲ್ ಪ್ರೀಸ್ಟ್ ಬಳಿಕ ವಿಶ್ವಕಪ್‌ ಸರಣಿಯಲ್ಲಿ ಒಂದಕ್ಕಿಂತ ಹೆಚ್ಚು ಶತಕ ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಆಗಿ ಅಲಿಸ್ಸಾ ಹೊರಹೊಮ್ಮಿದ್ದಾರೆ. ಅಲ್ಲದೆ, ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರ್ತಿಯೆಂಬ ಹೆಗ್ಗಳಿಕೆಗೂ ಅಲಿಸ್ಸಾ ಪಾತ್ರರಾಗಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಸೆಮಿ ಫೈನಲ್‌ ನಲ್ಲಿ ಅಲಿಸ್ಸಾ 129 ರನ್‌ ಗಳಿಸಿದ್ದರು.

 ಅಷ್ಟೇ ಅಲ್ಲ, ಮಹಿಳಾ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 500+ ರನ್ ಗಳಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಇತಿಹಾಸ ಸೃಷ್ಟಿಸಿದ ಅಲಿಸ್ಸಾ ಏಕದಿನ ಕ್ರಿಕೆಟ್‌ನಲ್ಲಿ ಶೀಘ್ರದಲ್ಲಿ 2,500 ರನ್ ಪೂರೈಸಿದ ಆಸ್ಟ್ರೇಲಿಯಾದ 9ನೇ ಆಟಗಾರ್ತಿಯಾಗಿದ್ದಾರೆ. ಈ ಸರಣಿಯಲ್ಲಿ 9 ಪಂದ್ಯಗಳನ್ನು ಆಡಿದ ಅಲಿಸ್ಸಾ 56.56 ರ ಸರಾಸರಿಯಲ್ಲಿ, 103.67 ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 509 ರನ್ ಗಳಿಸಿದ್ದಾರೆ.

ಅದ್ಭುತ ಪ್ರದರ್ಶನದೊಂದಿಗೆ ಈ ಸರಣಿ ಶ್ರೇಷ್ಟ ಆಟಗಾರ್ತಿಯಾಗಿ ಅಲಿಸ್ಸಾ ಆಯ್ಕೆಯಾಗಿದ್ದಾರೆ. ಅಲಿಸ್ಸಾ ಪತಿ ಮಿಚೆಲ್ ಸ್ಟಾರ್ಕ್ 2015 ರ ಐಸಿಸಿ ಪುರುಷರ ವಿಶ್ವಕಪ್‌ ಪಂದ್ಯಾವಳಿಯ ಸರಣಿಶ್ರೇಷ್ಟ ಆಟಗಾರ ಎಂದು ಗುರುತಿಸಿಕೊಂಡಿದ್ದರು. 2022 ರ ಮಹಿಳಾ ವಿಶ್ವಕಪ್‌ ನಲ್ಲಿ ಅಲಿಸ್ಸಾ ಸರಣಿ ಶ್ರೇಷ್ಟ ಆಟಗಾರ್ತಿಯಾಗಿರುವುದನ್ನು ಅನನ್ಯ ದಾಖಲೆಯಾಗಿ ಕ್ರೀಡಾಭಿಮಾನಿಗಳು ನೋಡಿದ್ದಾರೆ. ಆಸ್ಟ್ರೇಲಿಯಾ ತಂಡ ವಿಶ್ವಕಪ್‌ ಗೆದ್ದು, ಅಲಿಸ್ಸಾ ಸರಣಿ ಶ್ರೇಷ್ಟ ಆಟಹಾರ್ತಿಯಾಗಿ ಅನನ್ಯ ದಾಖಲೆಯನ್ನು ಸಾಧಿಸುತ್ತಿದ್ದಂತೆ, ಟ್ವಿಟರ್‌ನಲ್ಲಿ ಅಭಿಮಾನಿಗಳು ಈ ಜೋಡಿಯ ಅಪರೂಪದ ಸಾಧನೆಗಾಗಿ ಹೊಗಳಿದ್ದಾರೆ. ́ಕಪಲ್‌ ಗೋಲ್ಸ್‌ʼ ಎಂಬ ಒಕ್ಕಣೆಯೊಂದಿಗೆ ಜೋಡಿಯ ಚಿತ್ರ ಟ್ವಿಟರಿನಲ್ಲಿ ವೈರಲ್‌ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News