ಶ್ರೀಲಂಕಾದಲ್ಲಿ ಬಿಕ್ಕಟ್ಟು: ಪ್ರಧಾನಿ, ಅಧ್ಯಕ್ಷ ಹೊರತುಪಡಿಸಿ ರಾಜೀನಾಮೆ ಸಲ್ಲಿಸಿದ ಎಲ್ಲಾ ಸಂಪುಟ ಸಚಿವರು

Update: 2022-04-04 05:56 GMT

ಹೊಸದಿಲ್ಲಿ: ಶ್ರೀಲಂಕಾ ಸರ್ಕಾರದ ಸಚಿವ ಸಂಪುಟ ರವಿವಾರ ತಡರಾತ್ರಿ ಸಭೆ ನಡೆಸಿ ಸಾಮೂಹಿಕವಾಗಿ ರಾಜೀನಾಮೆ ನೀಡಿದೆ. ದೇಶದಲ್ಲಿ ಆರ್ಥಿಕ ಸಂಕಷ್ಟ ಮತ್ತಷ್ಟು ಉಲ್ಬಣಿಸಿದೆ ಎಂದು ಶಿಕ್ಷಣ ಸಚಿವ ದಿನೇಶ್ ಗುಣವರ್ಧನ ದೃಢಪಡಿಸಿದ್ದಾರೆ.

ರಾಷ್ಟ್ರಪತಿ ಗೊಟಬಯ ರಾಜಪಕ್ಸ ಮತ್ತು ಅವರ ಅಣ್ಣ ಹಾಗೂ ಪ್ರಧಾನಿ ಮಹೀಂದ ರಾಜಪಕ್ಸ ಅವರಿಗೆ ಎಲ್ಲ 26 ಮಂದಿ ಸಚಿವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಗಣವರ್ಧನ ಹೇಳಿದ್ದಾರೆ.

ಪ್ರಧಾನಿ ಮಹೀಂದಾ ರಾಜಪಕ್ಸ ಅವರ ಪುತ್ರ ಹಾಗೂ ಕ್ರೀಡಾ ಸಚಿವ ನಮಲ್ ರಾಜಪಕ್ಸ ಕೂಡಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

"ತಕ್ಷಣದಿಂದ ಜಾರಿಯಾಗುವಂತೆ ನನ್ನ ಎಲ್ಲ ಖಾತೆಗಳಿಗೆ ರಾಜೀನಾಮೆ ನೀಡಿದ್ದು, ಈ ಬಗ್ಗೆ ಅಧ್ಯಕ್ಷರ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದೇನೆ. ಇದು ಶ್ರೀಲಂಕಾದಲ್ಲಿ ಜನತೆಗೆ ಮತ್ತು ಸರ್ಕಾರಕ್ಕೆ ಸ್ಥಿರತೆ ಒದಗಿಸಲು ನೆರವಾಗುತ್ತದೆ ಎಂಬ ವಿಶ್ವಾಸ ನನ್ನದು. ನನ್ನ ಮತದಾರರಿಗೆ, ನನ್ನ ಪಕ್ಷಕ್ಕೆ ಮತ್ತು ಎಲ್ಲ ಜನತೆಗೆ ನಾನು ಬದ್ಧನಾಗಿರುತ್ತೇನೆ" ಎಂದು ನಮಲ್ ರಾಜಪಕ್ಸ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಯನ್ನು ಪ್ರಧಾನಿ ಕಚೇರಿ ಅಲ್ಲಗಳೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಶ್ರೀಲಂಕಾ ಪ್ರಸ್ತುತ ವಿದೇಶಿ ವಿನಿಮಯ ಕೊರತೆಯನ್ನು ಎದುರಿಸುತ್ತಿದ್ದು, ಇದರಿಂದಾಗಿ ಆಹಾರ, ಇಂಧನ, ವಿದ್ಯುತ್ ಮತ್ತು ಅನಿಲ ಕೊರತೆ ಎದುರಾಗಿದೆ. ಮಿತ್ರದೇಶಗಳು ನೆರವಾಗುವಂತೆ ಶ್ರೀಲಂಕಾ ಮನವಿ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News