ಐಪಿಎಲ್ ಪಂದ್ಯ ನಡೆಯುತ್ತಿದ್ದಾಗಲೇ ಮೈದಾನಕ್ಕೆ ನುಸುಳಿದ ವ್ಯಕ್ತಿಯ ಬಂಧನ
ಪುಣೆ: ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಶನಿವಾರ ನಡೆದ ಐಪಿಎಲ್ ಪಂದ್ಯದ ವೇಳೆ ಎಂಸಿಎ ಸ್ಟೇಡಿಯಂ ಮೈದಾನದೊಳಗೆ ನುಸುಳಿದ್ದ 26 ವರ್ಷದ ವ್ಯಕ್ತಿಯನ್ನು ಪುಣೆ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಪದೇ ಪದೇ ಎಚ್ಚರಿಕೆ ನೀಡಿದರೂ ಆ ವ್ಯಕ್ತಿ ಬೇಲಿ ಹಾರಿ ಮೈದಾನ ಪ್ರವೇಶಿಸಿದ. ಆತ ಆರಂಭದಲ್ಲಿ ವಿರಾಟ್ ಕೊಹ್ಲಿಗೆ ಮುಷ್ಟಿಯಿಂದ ಸ್ಪರ್ಶಿಸಿದ. ನಂತರ ರೋಹಿತ್ ಶರ್ಮಾ ಕಡೆಗೆ ಓಡಿದ. ಬಳಿಕ ಕರ್ತವ್ಯದಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಆತನನ್ನು ಮೈದಾನದಿಂದ ಹೊರಗೆ ಕರೆದೊಯ್ಯುತ್ತಿದ್ದಾಗ ಪೊಲೀಸರೊಂದಿಗೆ ಗಲಾಟೆ ಮಾಡಿದ್ದ.
ಬಂಧಿತ ವ್ಯಕ್ತಿಯನ್ನು ಸತಾರಾ ಜಿಲ್ಲೆಯ ಖಂಡಾಲಾ ತಾಲೂಕಿನ ನಿವಾಸಿ ದಶರತ್ ಜಾಧವ್ (26 ವರ್ಷ) ಎಂದು ಗುರುತಿಸಲಾಗಿದೆ. ಪಂದ್ಯ ನಡೆಯುತ್ತಿದ್ದ ವೇಳೆ ರಾತ್ರಿ 10.30ರಿಂದ 10.45ರ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ) ಹಾಗೂ 353 (ಸಾರ್ವಜನಿಕ ನೌಕರನ ಕರ್ತವ್ಯ ನಿರ್ವಹಣೆ ತಡೆಯಲು ಕ್ರಿಮಿನಲ್ ಬಲದ ಬಳಕೆ) ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ ಎಂದು ತಾಳೆಗಾಂವ್ ದಭಾಡೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಧುಕರ್ ಸಾವಂತ್ ತಿಳಿಸಿದ್ದಾರೆ.