ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು ಅಫ್ಗಾನ್‌ನ ಮೇಲೆ ಪರಿಣಾಮ ಬೀರದು: ತಾಲಿಬಾನ್‌

Update: 2022-04-11 18:39 GMT

ಕಾಬೂಲ್, ಎ.11: ಪಾಕಿಸ್ತಾನದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ಅಫ್ಗಾನಿಸ್ತಾನದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ತಾಲಿಬಾನ್ ಸೋಮವಾರ ಹೇಳಿದೆ

ಎರಡೂ ದೇಶಗಳ ಮಧ್ಯೆ ಉತ್ತಮ ರಾಜಕೀಯ ಮತ್ತು ಆರ್ಥಿಕ ಸಂಬಂಧವನ್ನು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಗಾನಿಸ್ತಾನ ಬಯಸುತ್ತದೆ. ಈಗ ಪಾಕಿಸ್ತಾನದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಉಭಯ ದೇಶಗಳ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅಫ್ಗಾನ್ ಸರಕಾರದ ಉಪವಕ್ತಾರ ಇನಾಮುಲ್ಲಾ ಸಮಂಗಾನಿ ಹೇಳಿರುವುದಾಗಿ ಟೋಲೊ ನ್ಯೂಸ್ ವರದಿ ಮಾಡಿದೆ

ಆದರೆ, ಪಾಕಿಸ್ತಾನದಲ್ಲಿನ ರಾಜಕೀಯ ಬೆಳವಣಿಗೆ ಮತ್ತು ಆಡಳಿತದಲ್ಲಿನ ಪ್ರಮುಖ ಬದಲಾವಣೆಯು ಅಫ್ಗಾನ್ನ ಮೇಲೆ ಕೆಲಮಟ್ಟಿನ ಪರಿಣಾಮ ಬೀರಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಹೊಸ ಸರಕಾರ ರಚನೆಯಾದಾಗ, ಅದರ ಕಾರ್ಯನೀತಿಯೂ ಬದಲಾಗುತ್ತದೆ. ಹೊಸ ಸರಕಾರ ತನ್ನ ಕಾರ್ಯನೀತಿಯನ್ನು ಶೀಘ್ರ ಘೋಷಿಸಲಿದೆ. ಪಾಕ್ನ ರಾಜಕೀಯ ಬೆಳವಣಿಗೆ ಅಫ್ಗಾನ್ನ ಮೇಲೆ ತುಸು ಮಟ್ಟಿಗಾದರೂ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ಎಂದು ಪಾಕಿಸ್ತಾನದ ಪತ್ರಕರ್ತ ತಾಹಿರ್ಖಾನ್ ಹೇಳಿದ್ದಾರೆ. ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು ಅಫ್ಗಾನ್ನ ಜನತೆ ಮತ್ತು ಸರಕಾರದ ಆರ್ಥಿಕ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ಅರ್ಥಶಾಸ್ತ್ರಜ್ಞ ಹಮೀದ್ ಅಝೀರ್ ಮುಜಾದಿದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News