ಸ್ಕಾಟ್ಲ್ಯಾಂಡ್: 48 ಮಹಿಳೆಯರಿಗೆ ಲೈಂಗಿಕ ಕಿರುಕುಳ; ಭಾರತೀಯ ಮೂಲದ ವೈದ್ಯರಿಗೆ ಶಿಕ್ಷೆ
ಎಡಿನ್ಬರ್ಗ್, ಎ.15: 48 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಭಾರತೀಯ ಮೂಲದ ವೈದ್ಯ ಕೃಷ್ಣ ಸಿಂಗ್ಗೆ ಶಿಕ್ಷೆ ವಿಧಿಸಿ ಸ್ಕಾಟ್ಲ್ಯಾಂಡ್ ನ ನ್ಯಾಯಾಲಯ ತೀರ್ಪು ನೀಡಿದೆ.
72 ವರ್ಷದ ಡಾಕ್ಟರ್ ಕೃಷ್ಣ ಸಿಂಗ್, ತನ್ನ ಮಹಿಳಾ ರೋಗಿಗಳ ಜತೆ ಅನುಚಿತವಾಗಿ ವರ್ತಿಸುತ್ತಿದ್ದರು. ಚಿಕಿತ್ಸೆ ಮತ್ತು ಆರೋಗ್ಯ ಪರೀಕ್ಷೆಯ ನೆಪದಲ್ಲಿ ಅವರನ್ನು ಅನವಶ್ಯಕ ಸ್ಪರ್ಷಿಸುವುದು, ತಬ್ಬಿಕೊಳ್ಳುವುದು, ಚುಂಬಿಸುವ ಜೊತೆಗೆ ಅಸಭ್ಯವಾಗಿ ಮಾತನಾಡುತ್ತಿದ್ದರು ಎಂದು ಓರ್ವ ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಅವರನ್ನು 2018ರ ಎಪ್ರಿಲ್ನಲ್ಲಿ ಸ್ಕಾಟ್ಲ್ಯಾಂಡ್ ಪೊಲೀಸರು ಬಂಧಿಸಿದ್ದರು. ಶಿಕ್ಷೆಯ ಪ್ರಮಾಣವನ್ನು ಮುಂದಿನ ತಿಂಗಳು ಘೋಷಿಸಲಾಗುವುದು. ಕೃಷ್ಣ ಸಿಂಗ್ ತನ್ನ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿದರೆ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ಗ್ಲಾಸ್ಗೊ ಹೈಕೋರ್ಟ್ ಹೇಳಿದೆ.
ತಾನು ಮುಗ್ದನಾಗಿದ್ದು ತನ್ನ ವಿರುದ್ಧ ಆರೋಪ ದಾಖಲಿಸಿರುವ ಮಹಿಳೆಯರದ್ದೇ ತಪ್ಪು ಎಂದು ವಾದಿಸಿದ್ದ ಡಾ. ಸಿಂಗ್, ಭಾರತದಲ್ಲಿ ಕಲಿತ ವೈದ್ಯಕೀಯ ತರಬೇತಿಯ ಪ್ರಕಾರ ರೋಗಿಗಳನ್ನು ಪರೀಕ್ಷೆ ಮಾಡುತ್ತಿದ್ದೆ ಎಂದು ಹೇಳಿದ್ದರು. ವೈದ್ಯಕೀಯ ಸೇವೆಗೆ ನೀಡಿದ ಅಮೋಘ ಸೇವೆಗಾಗಿ ಡಾ. ಕೃಷ್ಣ ಸಿಂಗ್ ರನ್ನು ‘ರೋಯಲ್ ಮೆಂಬರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪಯರ್’ ಅತ್ಯುನ್ನತ ಗೌರವಕ್ಕೆ ಆಯ್ಕೆ ಮಾಡಲಾಗಿತ್ತು.