100ನೇ ಐಪಿಎಲ್ ಪಂದ್ಯದಲ್ಲಿ ಶತಕ ಸಿಡಿಸಿದ ಕೆ.ಎಲ್.ರಾಹುಲ್
ಮುಂಬೈ, ಎ.16: ಲಕ್ನೊ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ತಾನಾಡಿದ 100ನೇ ಐಪಿಎಲ್ ಪಂದ್ಯದಲ್ಲಿ ಆಕರ್ಷಕ ಶತಕ (ಔಟಾಗದೆ 103 ರನ್, 60 ಎಸೆತ, 9 ಬೌಂಡರಿ, 5 ಸಿಕ್ಸರ್) ಸಿಡಿಸಿ ಗಮನ ಸೆಳೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರನೆಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
29ರ ಹರೆಯದ ರಾಹುಲ್ 91 ಇನಿಂಗ್ಸ್‌ಗಳಲ್ಲಿ ಮೂರು ಶತಕಗಳ ಸಹಿತ ಒಟ್ಟು 3,508 ರನ್ ಗಳಿಸಿದ್ದಾರೆ.
ಲಕ್ನೊ ತಂಡದ ನಾಯಕ ರಾಹುಲ್ ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆದ 26ನೇ ಐಪಿಎಲ್ ಪಂದ್ಯದಲ್ಲಿ ಔಟಾಗದೆ 103 ರನ್ ಕಲೆ ಹಾಕಿದರು. ರಾಹುಲ್ ಶತಕದ ಬಲದಿಂದ ಲಕ್ನೊ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 199 ರನ್ ಗಳಿಸಿತು.
ಕ್ವಿಂಟನ್ ಡಿಕಾಕ್ (24 ರನ್, 13 ಎಸೆತ) ಜೊತೆಗೆ ಇನಿಂಗ್ಸ್ ಆರಂಭಿಸಿದ ರಾಹುಲ್ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಮಿಲ್ಸ್ ಎಸೆತದಲ್ಲಿ ಬೌಂಡರಿ ಬಾರಿಸಿ 56 ಎಸೆತಗಳಲ್ಲಿ ಶತಕ ಪೂರೈಸಿದರು. ಐಪಿಎಲ್‌ನಲ್ಲಿ 3ನೇ ಶತಕ ಸಿಡಿಸಿದ ರಾಹುಲ್ ನಾಯಕನಾಗಿ 2ನೇ ಬಾರಿ ಶತಕ ದಾಖಲಿಸಿದರು. ಮುಂಬೈ ವಿರುದ್ಧ ಎರಡನೇ ಬಾರಿ ಶತಕ ಸಿಡಿಸಿರುವುದು ಮತ್ತೊಂದು ವಿಶೇಷ.
ರಾಹುಲ್ ಅವರು ವಿರಾಟ್ ಕೊಹ್ಲಿ(5 ಶತಕ)ಬಳಿಕ ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ 2ನೇ ಆಟಗಾರ ಎನಿಸಿಕೊಂಡರು. ಮಾತ್ರವಲ್ಲ ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ ಎರಡು ಬಾರಿ ಶತಕ ಗಳಿಸಿದ ನಾಲ್ಕನೇ ಬ್ಯಾಟರ್ ಎನಿಸಿಕೊಂಡರು. ಕ್ರಿಸ್ ಗೇಲ್(ಪಂಜಾಬ್ ಕಿಂಗ್ಸ್ ವಿರುದ್ಧ), ವಿರಾಟ್ ಕೊಹ್ಲಿ(ಗುಜರಾತ್ ಲಯನ್ಸ್ ವಿರುದ್ಧ), ಡೇವಿಡ್ ವಾರ್ನರ್(ಕೆಕೆಆರ್ ವಿರುದ್ಧ) ತಲಾ ಎರಡು ಬಾರಿ ಶತಕ ಸಿಡಿಸಿದ್ದಾರೆ.
ಡಿಕಾಕ್ ಅವರೊಂದಿಗೆ ಮೊದಲ ವಿಕೆಟ್‌ಗೆ 52 ರನ್ ಜೊತೆಯಾಟ ನಡೆಸಿದ ರಾಹುಲ್ ಉತ್ತಮ ಆರಂಭ ಒದಗಿಸಿದರು. ಡಿಕಾಕ್ ಔಟಾದ ಬಳಿಕ ಮನೀಶ್ ಪಾಂಡೆ(38 ರನ್, 29 ಎಸೆತ) ಅವರೊಂದಿಗೆ 2ನೇ ವಿಕೆಟ್‌ಗೆ 72 ರನ್ ಸೇರಿಸಿ ತಂಡವನ್ನು ಆಧರಿಸಿದರು.
ರಾಹುಲ್ ಈ ವರ್ಷದ ಐಪಿಎಲ್‌ನಲ್ಲಿ ಶತಕ ದಾಖಲಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡರು. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್(100 ರನ್,68 ಎಸೆತ) ಈ ವರ್ಷದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ದಾಖಲಿಸಿದ್ದರು.