ಮ್ಯಾಂಚೆಸ್ಟರ್ ಸಿಟಿಯನ್ನು ಸೋಲಿಸಿ ಎಫ್‍ಎ ಕಪ್ ಫೈನಲ್ ತಲುಪಿದ ಲಿವರ್‍ಪೂಲ್
ಲಿವರ್‍ಪೂಲ್: ಪ್ರಬಲ ಮ್ಯಾಂಚೆಸ್ಟರ್ ಸಿಟಿ ಕ್ಲಬ್ ತಂಡವನ್ನು 3-2 ಗೋಲುಗಳಿಂದ ಕೆಡವಿದ ಲಿವರ್‍ಪೂಲ್ ಕ್ಲಬ್ ಎಫ್‍ಎ ಕಪ್ ಫೈನಲ್ ತಲುಪಿದೆ.
ಜರ್ಗೆನ್ ಕ್ಲೋಪ್ ಅವರ ಪಡೆ ಇದೀಗ ಒಂದೇ ಸೀಸನ್‍ನಲ್ಲಿ ನಾಲ್ಕು ಪ್ರಮುಖ ಟ್ರೋಫಿಗಳನ್ನು ಗೆಲ್ಲುವ ಪ್ರಯತ್ನದಲ್ಲಿದೆ. ಈ ನಂಬಲಸಾಧ್ಯ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಮುಂದೆ ಸಾಗಿರುವ ತಂಡ ವ್ಯಾಂಬೆಯಲ್ಲಿ ಶನಿವಾರ ನಡೆದ ಸೆಮಿಫೈನಲ್‍ನ ಮೊದಲಾರ್ಧದಲ್ಲಿ ಆಕರ್ಷಕ ಪ್ರದರ್ಶನ ತೋರಿತು.
ಇಬ್ರಾಹಿಮಾ ಕೊಂತೆ ಆರಂಭದಲ್ಲೇ ಲಿವರ್‍ಪೂಲ್‍ಗೆ ಮುನ್ನಡೆ ದೊರಕಿಸಿಕೊಟ್ಟರೆ, ಸ್ಯಾಡಿಯೊ ಮಾನ್ ಗೋಲು ಸಿಡಿಸಿ ಮುನ್ನಡೆ ಹಿಗ್ಗಿಸಿದರು. ಇದಕ್ಕೆ ಮುಖ್ಯವಾಗಿ ಮ್ಯಾಂಚೆಸ್ಟರ್ ಸಿಟಿ ತಂಡದ ಗೋಲ್‍ಕೀಪರ್ ಝೆಕ್ ಸ್ಟೆಫನ್ ಅವರ ಪ್ರಮಾದಗಳು ಕಾರಣವಾದವು.
ಸೆನೆಗಲ್‍ನ ಮುನ್ಪಡೆ ಆಟಗಾರ ಮಾನ್ ಪೂರ್ವಾರ್ಧದಲ್ಲೇ ಮತ್ತೊಂದು ಗೋಲು ಗಳಿಸಿದರೆ, ದ್ವಿತೀಯಾರ್ಧದಲ್ಲಿ ಮ್ಯಾಂಚೆಸ್ಟರ್ ಸಿಟಿಯ ಜ್ಯಾಕ್ ಗ್ರೆಲಿಷ್ ಮತ್ತು ಬರ್ನಾರ್ಡೊ ಸಿಲ್ವಾ ಪ್ರತಿ ಹೋರಾಟ ಪ್ರದರ್ಶಿಸಿ ಎರಡು ಗೋಲುಗಳನ್ನು ಗಳಿಸಿದರು. ಆದರೂ ಲಿವರ್‍ಪೂಲ್‍ಗೆ ಸಂಪೂರ್ಣ ಪ್ರತಿಹೋರಾಟ ಕಂಡುಬರಲಿಲ್ಲ.
2012ರ ಬಳಿಕ ಮೊಟ್ಟಮೊದಲ ಬಾರಿಗೆ ಎಫ್‍ಎ ಕಪ್ ಫೈನಲ್ ತಲುಪಿರುವ ಲಿವರ್‍ಪೂಲ್, ರವಿವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ಚೆಲ್ಸಿಯಾ ಅಥವಾ ಕ್ರಿಸ್ಟಲ್ ಪ್ಯಾಲೇಸ್ ತಂಡವನ್ನು ಮೇ 14ರಂದು ನಡೆಯುವ ಫೈನಲ್‍ನಲ್ಲಿ ಎದುರಿಸಲಿದೆ. 15ನೇ ಬಾರಿಗೆ ಎಫ್‍ಎ ಕಪ್ ಫೈನಲ್ ತಲುಪಿರುವ ಕೆಂಪು ತಂಡ, 2006ರ ಬಳಿಕ ಎಫ್‍ಎ ಕಪ್ ಗೆದ್ದಿಲ್ಲ.