ಪೂರ್ವ ಉಕ್ರೇನ್ ಮೇಲೆ ರಷ್ಯಾ ದಾಳಿ; ಕೀವ್‍ಗೆ ಪಾಶ್ಚಾತ್ಯ ದೇಶಗಳ ಸಹಾಯಹಸ್ತ

Update: 2022-04-20 01:43 GMT

ಕೀವ್: ಪೂರ್ವ ಉಕ್ರೇನ್‍ನ ಮೇಲೆ ಪ್ರಹಾರ ಆರಂಭಿಸಿರುವ ರಷ್ಯಾ ಸೇನೆ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಸಜ್ಜಾಗಿದೆ.

ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗತರಾಗಬಯಸುವ ಉಕ್ರೇನ್ ಸೈನಿಕರು ಸುರಕ್ಷಿತವಾಗಿ ಮರಿಯೊಪೋಲ್ ಬಂದರಿನ ಅಝೋವ್‍ಸ್ಟಾಲ್ ಸ್ಟೀಲ್ ವರ್ಕ್ಸ್ ನಿಂದ ತೆರಳಲು ಅನುಕೂಲವಾಗುವಂತೆ ಕಾರಿಡಾರ್ ತೆರೆದಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಪ್ರಕಟಿಸಿದೆ. ‌ರಷ್ಯಾ ವಶಡಿಸಿಕೊಂಡಿರುವ ಮರಿಯೊಪೋಲ್ ಬಂದರಿನ ಉಕ್ಕು ಘಟಕದಿಂದ 120 ಮಂದಿ ನಾಗರಿಕರು ಈಗಾಗಲೇ ಸುರಕ್ಷಿತವಾಗಿ ತೆರಳಿದ್ದಾರೆ ಎಂದು ಹೇಳಿದೆ.

ಆದರೆ ಉಕ್ರೇನ್ ಸೋಲೊಪ್ಪಿಕೊಂಡಿಲ್ಲ. ಉಕ್ರೇನ್ ಸೇನೆಗೆ ಅಗತ್ಯವಿರುವ ಎಲ್ಲ ಶಸ್ತ್ರಾಸ್ತ್ರಗಳು ಇದ್ದಲ್ಲಿ ಈ ವೇಳೆಗಾಗಲೇ ಯುದ್ಧ ಮುಗಿಯುತ್ತಿತ್ತು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಈ ನಡುವೆ ಉಕ್ರೇನ್‍ಗೆ ಮತ್ತೊಂದು ಸುತ್ತಿನ ಮಿಲಿಟರಿ ನೆರವು ಘೋಷಿಸಲು ಅಮೆರಿಕ ಸಿದ್ಧತೆ ನಡೆಸಿದೆ. ರಷ್ಯನ್ ದಾಳಿಯಿಂದ ಹಾನಿಗೀಡಾಗಿರುವ ಕೀವ್‍ನ ಶಸ್ತ್ರಾಗಾರದಲ್ಲಿ ದುರಸ್ತಿ ಕಾರ್ಯಗಳಿಗೆ ಅಗತ್ಯ ಬಿಡಿ ಭಾಗಗಳು ಮತ್ತು ವಿಮಾನಗಳನ್ನು ಉಕ್ರೇನ್‍ಗೆ ನೀಡಲಾಗುವುದು ಎಂದು ಪೆಂಟಗಾನ್ ಸ್ಪಷ್ಟಪಡಿಸಿದೆ.

ಬ್ರಿಟನ್ ಕೂಡಾ ಮತ್ತೊಂದು ಸುತ್ತಿನ ನೆರವು ನೀಡಲಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಪ್ರಕಟಿಸಿದ್ದಾರೆ. ಉಕ್ರೇನ್‍ನ ಯುದ್ಧಾಪರಾಧಗಳ ಹೊಣೆಯನ್ನು ಪುಟಿನ್ ವಹಿಸಿಕೊಳ್ಳಬೇಕು ಎಂದು ಜರ್ಮನಿಯ ಚಾನ್ಸ್ ಲರ್ ಹೇಳಿಕೆ ನೀಡಿದ್ದಾರೆ.

ಪೂರ್ವ ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸುತ್ತಿದ್ದಂತೆ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿವೆ. ಪಾಶ್ಚಿಮಾತ್ಯ ದೇಶಗಳ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿರುವ ರಷ್ಯಾ, ಮೂರು ಯೂರೋಪಿಯನ್ ಒಕ್ಕೂಟ ದೇಶಗಳ 31 ಮಂದಿ ರಾಜತಾಂತ್ರಿಕರನ್ನು ಉಚ್ಚಾಟಿಸಿರುವುದಾಗಿ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News