×
Ad

ಐಪಿಎಲ್: ಕೋಲ್ಕತಾ ವಿರುದ್ಧ ಗುಜರಾತ್‌ಗೆ ರೋಚಕ ಜಯ

Update: 2022-04-23 20:03 IST
Photo:twitter

  ನವಿ ಮುಂಬೈ, ಎ.23: ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ ಗುಜರಾತ್ ಟೈಟಾನ್ಸ್ ತಂಡ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 8 ರನ್‌ಗಳಿಂದ ರೋಚಕ ಜಯ ದಾಖಲಿಸಿದೆ.

ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ನ 35ನೇ ಪಂದ್ಯದಲ್ಲಿ ಗೆಲ್ಲಲು 157 ರನ್ ಗುರಿ ಬೆನ್ನಟ್ಟಿದ ಕೆಕೆಆರ್ ತಂಡವನ್ನು ಗುಜರಾತ್ 8 ವಿಕೆಟ್‌ ನಷ್ಟಕ್ಕೆ 148 ರನ್‌ಗೆ ನಿಯಂತ್ರಿಸಿ ಗೆಲುವಿನ ನಗೆ ಬೀರಿತು. ಆ್ಯಂಡ್ರೆ ರಸೆಲ್ ಕೇವಲ 25 ಎಸೆತಗಳಲ್ಲಿ 48 ರನ್(1 ಬೌಂಡರಿ,6 ಸಿಕ್ಸರ್) ಸಿಡಿಸಿ ಕೆಕೆಆರ್‌ಗೆ ಗೆಲುವಿನ ವಿಶ್ವಾಸ ಮೂಡಿಸಿದರು.

34 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿದ್ದ ಕೆಕೆಆರ್‌ಗೆ ರಿಂಕು ಸಿಂಗ್(35 ರನ್), ಆ್ಯಂಡ್ರೆ ರಸೆಲ್ ಆಸರೆಯಾದರು. ಗುಜರಾತ್ ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಶಮಿ(2-20), ರಶೀದ್ ಖಾನ್(2-22) ಹಾಗೂ ಯಶ್ ದಯಾಳ್(2-42) ತಲಾ ಎರಡು ವಿಕೆಟ್ ಪಡೆದರು.
  
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡ 9 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ನಾಯಕ ಹಾರ್ದಿಕ್ ಪಾಂಡ್ಯ 49 ಎಸೆತಗಳಲ್ಲಿ 67 ರನ್ (4 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ಹಾರ್ದಿಕ್ ಹಾಗೂ ರಶೀದ್ ಖಾನ್‌ರನ್ನು ಒಂದೇ ಓವರ್‌ನಲ್ಲಿ ಔಟ್ ಮಾಡಿದ ಸೌಥಿ(3-24) ಗುಜರಾತ್‌ಗೆ ತಿರುಗೇಟು ನೀಡಿದರು.

ಆಲ್‌ರೌಂಡರ್ ಆ್ಯಂಡ್ರೆ ರಸೆಲ್(4-5) ಅಂತಿಮ ಓವರ್‌ನಲ್ಲಿ 4 ವಿಕೆಟ್‌ಗಳನ್ನು ಉರುಳಿಸಿ ಗುಜರಾತ್‌ನ ದಿಢೀರ್ ಕುಸಿತಕ್ಕೆ ಕಾರಣರಾದರು. ಗುಜರಾತ್ ಪರ ಡೇವಿಡ್ ಮಿಲ್ಲರ್(27 ರನ್),ವೃದ್ದಿಮಾನ್ ಸಹಾ(25)ಹಾಗೂ ರಾಹುಲ್ ತೆವಾಟಿಯಾ(17)ಎರಡಂಕೆಯ ಸ್ಕೋರ್ ಗಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News