ಐಪಿಎಲ್: ನಟರಾಜನ್,ಜಾನ್ಸನ್ ಮಾರಕ ದಾಳಿ; ಆರ್‌ಸಿಬಿ ವಿರುದ್ಧ ಹೈದರಾಬಾದ್‌ಗೆ ಸುಲಭ ಜಯ
ಮುಂಬೈ, ಎ.23: ಎಡಗೈ ವೇಗದ ಬೌಲರ್‌ಗಳಾದ ಟಿ.ನಟರಾಜನ್(3-10) ಹಾಗೂ ಮಾರ್ಕೊ ಜಾನ್ಸನ್(3-25)ಸಂಘಟಿಸಿದ ಮಾರಕ ಬೌಲಿಂಗ್ ದಾಳಿ ಹಾಗೂ ಅಭಿಷೇಕ್ ಶರ್ಮಾ(47 ರನ್,28 ಎಸೆತ, 8 ಬೌಂಡರಿ,1 ಸಿಕ್ಸರ್), ನಾಯಕ ಕೇನ್ ವಿಲಿಯಮ್ಸನ್(ಔಟಾಗದೆ 16, 17 ಎಸೆತ, 2 ಬೌಂಡರಿ) ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್‌ನ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು.
ಸತತ 5ನೇ ಗೆಲುವು ದಾಖಲಿಸಿದ ಹೈದರಾಬಾದ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಬಿರುಗಾಳಿ ಬೌಲಿಂಗ್ ಮಾಡಿದ ಜಾನ್ಸನ್ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆರ್‌ಸಿಬಿ 16.1 ಓವರ್‌ಗಳಲ್ಲಿ ಕೇವಲ 68 ರನ್‌ಗೆ ಗಂಟುಮೂಟೆ ಕಟ್ಟಿತು. ಗೆಲ್ಲಲು ಸುಲಭ ಗುರಿ ಪಡೆದ ಹೈದರಾಬಾದ್ 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತು. ಅಭಿಷೇಕ್ ಹಾಗೂ ವಿಲಿಯಮ್ಸನ್ ಮೊದಲ ವಿಕೆಟ್‌ಗೆ 64 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ಆರ್‌ಸಿಬಿ ಐಪಿಎಲ್‌ನಲ್ಲಿ ಎರಡನೇ ಬಾರಿ ಕನಿಷ್ಠ ಸ್ಕೋರ್ ಗಳಿಸಿತು. ಈ ಹಿಂದೆ 2017ರಲ್ಲಿ ಕೆಕೆಆರ್ ವಿರುದ್ಧ 49 ರನ್ ಗಳಿಸಿತ್ತು. ಆರ್‌ಸಿಬಿ 8ನೇ ಬಾರಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ,ಆರಂಭಿಕ ಬ್ಯಾಟರ್ ಅನುಜ್ ರಾವತ್ ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ರನ್ ಖಾತೆ ತೆರೆಯಲು ವಿಫಲರಾದರು. ಇತ್ತೀಚೆಗೆ ಲಕ್ನೊ ವಿರುದ್ಧ ಸೊನ್ನೆಗೆ ಔಟಾಗಿದ್ದ ಕೊಹ್ಲಿ ಸತತ ಎರಡನೇ ಬಾರಿ ಶೂನ್ಯಕ್ಕೆ ಔಟಾದರು. ಸುಯಶ್ ಪ್ರಭುದೇಸಾಯಿ 15 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.
ನಾಯಕ ಎಫ್‌ಡು ಪ್ಲೆಸಿಸ್(5 ರನ್)2ನೇ ಓವರ್‌ನಲ್ಲಿ ಔಟಾಗುವುದರೊಂದಿಗೆ ಆರ್‌ಸಿಬಿ ವಿಕೆಟ್ ಪತನ ಆರಂಭವಾಯಿತು. ಜಾನ್ಸನ್ ತಾನೆಸೆದ ಮೊದಲ ಓವರ್‌ನಲ್ಲಿ ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಅನುಜ್ ರಾವತ್ ವಿಕೆಟ್ ಪಡೆದು ಅಬ್ಬರಿಸಿದರು. ಉಮ್ರಾನ್ ಮಲಿಕ್ ಮಧ್ಯಮ ಓವರ್‌ನಲ್ಲಿ ಹಾಗೂ ನಟರಾಜನ್ ಡೆತ್ ಓವರ್‌ನಲ್ಲಿ ಆರ್‌ಸಿಬಿ ಮೇಲೆ ಮುಗಿಬಿದ್ದರು. ಶಿಸ್ತುಬದ್ಧ ಬೌಲಿಂಗ್ ಮಾಡಿದ ನಟರಾಜನ್, ಜಾನ್ಸನ್‌ಗೆ ಜಗದೀಶ ಸುಚಿತ್(2-12), ಭುವನೇಶ್ವರ ಕುಮಾರ್(1-8) ಹಾಗೂ ಉಮ್ರಾನ್ ಮಲಿಕ್(1-13) ಸಾಥ್ ನೀಡಿದರು.