ಪಾಕಿಸ್ತಾನ: 15 ತಿಂಗಳಲ್ಲಿ ಮೊದಲ ಪೋಲಿಯೊ ಪ್ರಕರಣ ಪತ್ತೆ

Update: 2022-04-23 18:18 GMT

ಇಸ್ಲಮಾಬಾದ್, ಎ.23: ಪಾಕಿಸ್ತಾನದಲ್ಲಿ 15 ತಿಂಗಳಲ್ಲಿ ಪ್ರಥಮ ಪೋಲಿಯೊ ರೋಗದ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಲಿಯೊ ನಿರ್ಮೂಲನಕ್ಕಾಗಿನ ರಾಷ್ಟ್ರೀಯ ಕಾರ್ಯಪಡೆಯ ತುರ್ತು ಸಭೆಯನ್ನು ಸೋಮವಾರ ಕರೆಯಲಾಗಿದೆ ಎಂದು ಪಾಕಿಸ್ತಾನದ ಪ್ರಧಾನಿಯವರ ಕಚೇರಿ ಹೇಳಿದೆ.

 ಉತ್ತರ ವಝೀರಿಸ್ತಾನದ ವಾಯವ್ಯ ಜಿಲ್ಲೆಯಲ್ಲಿ ಶುಕ್ರವಾರ 15 ತಿಂಗಳ ಗಂಡುಮಗುವಿನಲ್ಲಿ ಈ ಮಾರಕ ರೋಗದ ವೈರಸ್ ಪತ್ತೆಯಾಗಿದೆ ಎಂದು ಪಾಕಿಸ್ತಾನದ ಪೋಲಿಯೊ ನಿರ್ಮೂಲನ ಕಾರ್ಯಕ್ರಮದ ರಾಷ್ಟ್ರೀಯ ತುರ್ತು ಕಾರ್ಯನಿರ್ವಹಣಾ ಕೇಂದ್ರದ ಸಂಯೋಜಕ ಶಹಝಾದ್ ಬೇಗ್ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ 2022ರಲ್ಲಿ ವಿಶ್ವದಲ್ಲಿ ಪತ್ತೆಯಾದ ಪೋಲಿಯೊ ಪ್ರಕರಣಗಳ ಸಂಖ್ಯೆ 3ಕ್ಕೇರಿದೆ. ಮಲವಿ ಮತ್ತು ಅಫ್ಗಾನಿಸ್ತಾನದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ ಎಂದು ಜಾಗತಿಕ ಪೋಲಿಯೊ ನಿರ್ಮೂಲನಾ ಅಭಿಯಾನದ ಹೇಳಿಕೆ ತಿಳಿಸಿದೆ.

 ಪೋಲಿಯೊ ನಿರ್ಮೂಲನೆಗೆ ವ್ಯಾಪಕ ಕ್ರಮ ಕೈಗೊಂಡಿದ್ದ ಬಳಿಕ 2020ರಲ್ಲಿ ಯಾವುದೇ ಪೋಲಿಯೊ ಪ್ರಕರಣ ದಾಖಲಾಗದ ಪಾಕಿಸ್ತಾನದಲ್ಲಿ 2021ರ ಜನವರಿಯಲ್ಲಿ ಒಂದು ಪ್ರಕರಣ ಪತ್ತೆಯಾಗಿತ್ತು. ನಂತರ 15 ತಿಂಗಳ ಬಳಿಕ ಈಗ ಮತ್ತೊಂದು ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸೋಂಕು ಇನ್ನಷ್ಟು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ. ಪೋಲಿಯೊ ನಿರ್ಮೂಲನೆಯಾಗಿದೆ ಎಂದು ಅಧಿಕೃತವಾಗಿ ಘೋಷಿಸಬೇಕಿದ್ದರೆ ಆ ದೇಶದಲ್ಲಿ ಸತತ 3 ವರ್ಷ ಪೋಲಿಯೊ ಪ್ರಕರಣ ದಾಖಲಾಗಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News