×
Ad

ಐಪಿಎಲ್: ಧವನ್ ಭರ್ಜರಿ ಅರ್ಧಶತಕ, ಚೆನ್ನೈ ವಿರುದ್ಧ್ದ ಪಂಜಾಬ್ ಜಯಭೇರಿ

Update: 2022-04-25 23:36 IST
Photo:twitter

ಮುಂಬೈ, ಎ.25: ಆರಂಭಿಕ ಬ್ಯಾಟರ್ ಶಿಖರ್ ಧವನ್ ಭರ್ಜರಿ ಅರ್ಧಶತಕ(ಔಟಾಗದೆ 88, 59 ಎಸೆತ, 9 ಬೌಂಡರಿ, 2 ಸಿಕ್ಸರ್)ಹಾಗೂ ಬೌಲರ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ 11 ರನ್‌ಗಳ ರೋಚಕ ಗೆಲುವು ದಾಖಲಿಸಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್‌ನ 38ನೇ ಪಂದ್ಯದಲ್ಲಿ ಗೆಲ್ಲಲು 188 ರನ್ ಗುರಿ ಬೆನ್ನಟ್ಟಿದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಮಧ್ಯಮ ಸರದಿ ಬ್ಯಾಟರ್ ಅಂಬಟಿ ರಾಯುಡು(78 ರನ್, 39 ಎಸೆತ, 7 ಬೌಂಡರಿ, 6 ಸಿಕ್ಸರ್)ಚೆನ್ನೈಗೆ ಗೆಲುವಿನ ವಿಶ್ವಾಸ ಮೂಡಿಸಿದರು. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್(30 ರನ್), ರವೀಂದ್ರ ಜಡೇಜ(ಔಟಾಗದೆ 21), ಧೋನಿ(12) ಎರಡಂಕೆಯ ಸ್ಕೋರ್ ಗಳಿಸಿದರು.

ಪಂಜಾಬ್ ಪರ ಕಾಗಿಸೊ ರಬಾಡ(2-23)ಹಾಗೂ ರಿಷಿ ಧವನ್(2-39) ತಲಾ ಎರಡು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್(1-23) ಹಾಗೂ ಸಂದೀಪ್ ಶರ್ಮಾ(1-40)ತಲಾ ಒಂದು ವಿಕೆಟ್ ಪಡೆದರು.

ಪಂಜಾಬ್ ಕಿಂಗ್ಸ್ 8 ಪಂದ್ಯಗಳ ಪೈಕಿ 4ರಲ್ಲಿ ಜಯ, 4 ರಲ್ಲಿ ಸೋಲು ಅನುಭವಿಸಿದ್ದು ಒಟ್ಟು 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ, ಚಾಂಪಿಯನ್ ಚೆನ್ನೈ ತಂಡ ಈವರೆಗೆ ಆಡಿರುವ 8 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಜಯ ಸಾಧಿಸಿದ್ದು 6 ಪಂದ್ಯಗಳಲ್ಲಿ ಸೋಲನುಭವಿಸಿ 9ನೇ ಸ್ಥಾನದಲ್ಲಿದೆ.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News