×
Ad

ಟೆನಿಸ್ ದಂತಕತೆ ಬೊರಿಸ್ ಬೆಕರ್‌ಗೆ ಎರಡೂವರೆ ವರ್ಷ ಜೈಲು ಶಿಕ್ಷೆ

Update: 2022-04-29 21:16 IST
Photo:twitter

 ಲಂಡನ್, ಎ.29: 2017ರ ದಿವಾಳಿತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ಬ್ರಿಟಿಷ್ ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಜರ್ಮನಿಯ ಮಾಜಿ ಟೆನಿಸ್ ಚಾಂಪಿಯನ್ ಬೊರಿಸ್ ಬೆಕರ್ ಎರಡೂವರೆ ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

54ರ ವಯಸ್ಸಿನ, ಆರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಬೆಕರ್ ತಮ್ಮ ವ್ಯಾಪಾರ ಖಾತೆಯಿಂದ ಭಾರೀ ಮೊತ್ತದ ಹಣವನ್ನು ವರ್ಗಾವಣೆ ಮಾಡಿದ, ಜರ್ಮನಿಯಲ್ಲಿ ತನ್ನ ಆಸ್ತಿಯನ್ನು ಘೋಷಿಸದ ಹಾಗೂ 825,000 ಯುರೋ  ಸಾಲ ಹಾಗೂ ಟೆಕ್ ಸಂಸ್ಥೆಯಲ್ಲಿ ಷೇರುಗಳಿರುವುದನ್ನು ಘೋಷಿಸದೆ ಇರುವುದಕ್ಕೆ ಲಂಡನ್‌ನ ಸೌತ್‌ವಾರ್ಕ್ ಕ್ರೌನ್ ಕೋರ್ಟ್‌ನಿಂದ ಶಿಕ್ಷೆಗೆ ಒಳಗಾದರು.

ದಿವಾಳಿತನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಬೃಹತ್ ಆಸ್ತಿಗಳನ್ನು ಬಹಿರಂಗಪಡಿಸಲು ವಿಫಲವಾಗಿರುವುದು, ಮರೆಮಾಚಿರುವುದು ಸೇರಿದಂತೆ ಬ್ರಿಟನ್‌ನ ದಿವಾಳಿತನ ಕಾಯಿದೆಯಡಿಯಲ್ಲಿ ನಾಲ್ಕು ಆರೋಪಗಳಿಗೆ ಬೆಕರ್ ಅವರಿಗೆ ಈ ತಿಂಗಳ ಆರಂಭದಲ್ಲಿ ಶಿಕ್ಷೆ ವಿಧಿಸಲಾಯಿತು.

ತಮ್ಮ ಯಶಸ್ವಿ ಟೆನಿಸ್ ವೃತ್ತಿಜೀವನದಲ್ಲಿ ಗೆದ್ದಿರುವ ಟ್ರೋಫಿಗಳು ಹಾಗೂ ಪದಕಗಳನ್ನು ಹಸ್ತಾಂತರಿಸಲು ವಿಫಲವಾದ ಇನ್ನೂ 20 ಆರೋಪಗಳಿಂದ ಬೆಕರ್ ಅವರನ್ನು ಈ ತಿಂಗಳ ಆರಂಭದಲ್ಲಿ ದೋಷಮುಕ್ತಗೊಳಿಸಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News