×
Ad

ಐಪಿಎಲ್: ಮೊಹ್ಸಿನ್ ಖಾನ್ ಮಾರಕ ಬೌಲಿಂಗ್, ಡೆಲ್ಲಿ ವಿರುದ್ಧ ಲಕ್ನೊಗೆ ‘ಸೂಪರ್’ ಜಯ

Update: 2022-05-01 19:50 IST
ಮೊಹ್ಸಿನ್ ಖಾನ್, Photo: twitter

  ಮುಂಬೈ, ಮೇ 1: ಉತ್ತರಪ್ರದೇಶದ ಎಡಗೈ ವೇಗದ ಬೌಲರ್ ಮೊಹ್ಸಿನ್ ಖಾನ್ ಮಾರಕ ಬೌಲಿಂಗ್(4-16)ದಾಳಿಯ ನೆರವಿನಿಂದ ಲಕ್ನೊ ಸೂಪರ್ ಜೈಂಟ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯವನ್ನು 6 ರನ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ.
  
ರವಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 45ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 196 ರನ್ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿ ಸೋಲೊಪ್ಪಿಕೊಂಡಿತು.

4 ಓವರ್‌ಗಳ ಬೌಲಿಂಗ್‌ನಲ್ಲಿ ಕೇವಲ 16 ರನ್ ನೀಡಿದ ಮೊಹ್ಸಿನ್ ಖಾನ್ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ರಿಷಭ್ ಪಂತ್ ಹಾಗೂ ಪೊವೆಲ್‌ಗೆ ಪೆವಿಲಿಯನ್ ಹಾದಿ ತೋರಿಸಿ ಲಕ್ನೊದ ಗೆಲುವಿನ ಹಾದಿ ಸುಗಮಗೊಳಿಸಿದರು.

ತಾನಾಡಿದ 10ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿದ ಲಕ್ನೊ 14 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಡೆಲ್ಲಿ 9ನೇ ಪಂದ್ಯದಲ್ಲಿ 5ನೇ ಸೋಲನುಭವಿಸಿ 6ನೆ ಸ್ಥಾನದಲ್ಲಿದೆ.

 ಆರಂಭಿಕ ಆಟಗಾರರಾದ ಪೃಥ್ವಿ ಶಾ(5 ರನ್) ಹಾಗೂ ಡೇವಿಡ್ ವಾರ್ನರ್(3)ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡ ಡೆಲ್ಲಿ ಕಳಪೆ ಆರಂಭ ಪಡೆಯಿತು. ಆಗ 3ನೇ ವಿಕೆಟ್‌ಗೆ 60 ರನ್ ಜೊತೆಯಾಟ ನಡೆಸಿದ ನಾಯಕ ರಿಷಭ್ ಪಂತ್(44 ರನ್, 30 ಎಸೆತ, 7 ಬೌಂಡರಿ, 1 ಸಿಕ್ಸರ್)ಹಾಗೂ ಮಿಚೆಲ್ ಮಾರ್ಷ್(37 ರನ್, 20 ಎಸೆತ, 3 ಬೌಂಡರಿ, 3 ಸಿಕ್ಸರ್)ತಂಡವನ್ನು ಆಧರಿಸಿದರು.

ರೋವ್‌ಮನ್ ಪೊವೆಲ್(35 ರನ್, 21 ಎಸೆತ,3 ಬೌಂಡರಿ, 2 ಸಿಕ್ಸರ್ ), ಅಕ್ಷರ್ ಪಟೇಲ್(ಔಟಾಗದೆ 42 ರನ್, 24 ಎಸೆತ, 1 ಬೌಂಡರಿ, 3 ಸಿಕ್ಸರ್) ಹಾಗೂ ಕುಲದೀಪ್ ಯಾದವ್(ಔಟಾಗದೆ 16, 8 ಎಸೆತ) ಒಂದಷ್ಟು ಪ್ರತಿರೋಧ ಒಡ್ಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ತಲಾ ಒಂದು ವಿಕೆಟ್‌ಗಳನ್ನು ಉರುಳಿಸಿದ ರವಿ ಬಿಷ್ಣೋಯಿ(1-28), ಕೆ.ಗೌತಮ್(1-23), ದುಷ್ಮಂತ ಚಾಮೀರ(1-44)ಯಶಸ್ವಿ ಬೌಲರ್ ಮೊಹ್ಸಿನ್ ಖಾನ್‌ಗೆ ಸಾಥ್ ನೀಡಿದರು.

ಲಕ್ನೊ 195/3: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೊ ಸೂಪರ್ ಜೈಂಟ್ಸ್ ತಂಡ ನಾಯಕ ಕೆ.ಎಲ್.ರಾಹುಲ್ ಹಾಗೂ ದೀಪಕ್ ಹೂಡಾ ಗಳಿಸಿದ ಅರ್ಧಶತಕದ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿತು.

  ರಾಹುಲ್ ಹಾಗೂ ಡಿಕಾಕ್ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 42 ರನ್ ಸೇರಿಸಿ ಲಕ್ನೊಗೆ ಉತ್ತಮ ಆರಂಭ ಒದಗಿಸಿದರು. ಡಿಕಾಕ್(23 ರನ್,13 ಎಸೆತ, 3 ಬೌಂಡರಿ, 1 ಸಿಕ್ಸರ್) ವಿಕೆಟನ್ನು ಉರುಳಿಸಿದ ಶಾರ್ದೂಲ್ ಠಾಕೂರ್ ಈ ಜೋಡಿಯನ್ನು ಬೇರ್ಪಡಿಸಿದರು. ರಾಹುಲ್ (77 ರನ್, 51 ಎಸೆತ, 4 ಬೌಂಡರಿ, 5 ಸಿಕ್ಸರ್)ಹಾಗೂ ದೀಪಕ್ ಹೂಡಾ(52 ರನ್, 34 ಎಸೆತ, 6 ಬೌಂಡರಿ, 1 ಸಿಕ್ಸರ್)ಎರಡನೇ ವಿಕೆಟ್‌ಗೆ 95 ರನ್ ಗಳಿಸಿ ತಂಡವನ್ನು ಆಧರಿಸಿದರು.

ಮಾರ್ಕಸ್ ಸ್ಟೋನಿಸ್(ಔಟಾಗದೆ 17, 16 ಎಸೆತ) ಹಾಗೂ ಕೃನಾಲ್ ಪಾಂಡ್ಯ(ಔಟಾಗದೆ 9 ರನ್,6 ಎಸೆತ)4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 8 ಎಸೆತಗಳಲ್ಲಿ 19 ರನ್ ಸೇರಿಸಿ ತಂಡದ ಮೊತ್ತವನ್ನು 195ಕ್ಕೆ ತಲುಪಿಸಿದರು. ಡೆಲ್ಲಿ ಪರ ಠಾಕೂರ್(3-40) ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಆಡುವ 11ರ ಬಳಗಕ್ಕೆ ಆವೇಶ್‌ಖಾನ್ ಬದಲಿಗೆ ಕೆ.ಗೌತಮ್‌ರನ್ನು ಸೇರಿಸಿಕೊಳ್ಳಲಾಗಿದೆ ಎಂದು ನಾಯಕ ರಾಹುಲ್ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News