ಮರಿಯುಪೋಲ್ ಉಕ್ಕು ಸ್ಥಾವರದಿಂದ 20 ನಾಗರಿಕರ ಸ್ಥಳಾಂತರ‌

Update: 2022-05-01 17:49 GMT

ಮರಿಯುಪೋಲ್, ಮೇ 1: ಉಕ್ರೇನ್ನ ಆಯಕಟ್ಟಿನ ಬಂದರು ನಗರ ಮರಿಯುಪೋಲ್ನ ಉಕ್ಕು ಸ್ಥಾವರದೊಳಗೆ ಆಶ್ರಯ ಪಡೆದಿರುವ ನಾಗರಿಕರ ತೆರವು ಪ್ರಕ್ರಿಯೆ ಆರಂಭವಾಗಿದ್ದು ಶನಿವಾರ ಕನಿಷ್ಟ 20 ನಾಗರಿಕರು ಅಲ್ಲಿಂದ ಹೊರಬಿದ್ದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. 

ಮರಿಯುಪೋಲ್ ರಶ್ಯ ಸೇನೆಯ ನಿಯಂತ್ರಣಕ್ಕೆ ಬಂದಿದ್ದರೂ ಅಲ್ಲಿನ ಅಝೋವ್ ಪ್ರದೇಶದಲ್ಲಿನ ಉಕ್ಕು ಸ್ಥಾವರದೊಳಗೆ ಸೇರಿಕೊಂಡಿರುವ ಉಕ್ರೇನ್ ಯೋಧರು ಪ್ರತಿರೋಧ ಮುಂದುವರಿಸಿದ್ದಾರೆ. ಉಕ್ಕು ಸ್ಥಾವರದೊಳಗೆ ಕೆಲವು ನಾಗರಿಕರೂ ಆಶ್ರಯ ಪಡೆದಿದ್ದು ಅವರ ಸುರಕ್ಷಿತ ಸ್ಥಳಾಂತರಕ್ಕೆ ಅನುವು ಮಾಡಿಕೊಡುವುದಾಗಿ ರಶ್ಯ ಸೇನೆ ಹೇಳಿತ್ತು. ಅದರಂತೆ ಶನಿವಾರ ಸುಮಾರು 20 ಪ್ರಜೆಗಳು ಸ್ಥಾವರದಿಂದ ಹೊರಬಿದ್ದಿದ್ದು 225 ಕಿ.ಮೀ ದೂರದಲ್ಲಿರುವ ಝಫೋರ್ಜಿಯಾ ನಗರದತ್ತ ತೆರಳಿದ್ದಾರೆ ಎಂದು ಉಕ್ರೇನ್ ಸೇನೆ ಹೇಳಿದೆ. 

ಕನಿಷ್ಟ 25 ಮಂದಿ ಉಕ್ಕು ಸ್ಥಾವರದಿಂದ ಸ್ಥಳಾಂತರಗೊಂಡಿರುವುದಾಗಿ ರಶ್ಯದ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಶನಿವಾರದ ತೆರವು ಕಾರ್ಯಾಚರಣೆ ವಿಶ್ವಸಂಸ್ಥೆಯ ಉಸ್ತುವಾರಿಯಲ್ಲಿ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅಝೊವಸ್ಟಲ್ ಉಕ್ಕಿನ ಸ್ಥಾವರದೊಳಗೆ ಬೃಹತ್ ಸುರಂಗಗಳಿದ್ದು ಇಲ್ಲಿ ಉಕ್ರೇನ್ನ ಯೋಧರ ಜತೆ ಹಲವು ಪ್ರಜೆಗಳೂ ಆಶ್ರಯ ಪಡೆದಿದ್ದು ಅವರಿಗೆ ಸರಿಯಾಗಿ ಆಹಾರ, ನೀರು ದೊರಕುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಉಕ್ರೇನ್ನ ಪಶ್ಚಿಮ ಪ್ರಾಂತ, ಕಪ್ಪು ಸಮುದ್ರದ ದಡದಲ್ಲಿರುವ ಒಡೆಸ್ಸಾ ನಗರದ ಮೇಲೆ ರಶ್ಯ ಶನಿವಾರ ಭಾರೀ ಕ್ಷಿಪಣಿ ದಾಳಿ ನಡೆಸಿದೆ.

ಕ್ಷಿಪಣಿ ದಾಳಿಯಲ್ಲಿ ವಿಮಾನ ನಿಲ್ದಾಣದ ರನ್ವೇ ಸಂಪೂರ್ಣ ಧ್ವಂಸವಾಗಿದ್ದು ನಿಲ್ದಾಣದ ಮೂಲಸೌಕರ್ಯಕಕೂ ಹಾನಿಯಾಗಿದೆ. ಆದರೆ ಪ್ರಾಣಹಾನಿಯಾದ ವರದಿಯಾಗಿಲ್ಲ ಎಂದು ಒಡೆಸ್ಸಾದ ಪ್ರಾದೇಶಿಕ ಗವರ್ನರ್ ಮ್ಯಾಕ್ಸಿಂ ಮಾರ್ಚೆಂಕೊ ಹೇಳಿದ್ದಾರೆ. ರಶ್ಯದ ಯುದ್ಧಾಪರಾಧದ ಕೇಂದ್ರಸ್ಥಾನ ಎಂದು ಪಾಶ್ಚಿಮಾತ್ಯ ದೇಶಗಳು ಆರೋಪಿಸಿರುವ ಉಕ್ರೇನ್ನ ಬುಚಾ ನಗರದ ರಸ್ತೆ ಬದಿಯ ಹೊಂಡದಲ್ಲಿ ಶನಿವಾರ ಮತ್ತೆ 3 ಮೃತದೇಹ ಪತ್ತೆಯಾಗಿದೆ. ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೈಗಳನ್ನು ಹಿಂದಕ್ಕೆ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಅಮಾನುಷ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ನ ಪೊಲೀಸರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News