×
Ad

ಈ ವರ್ಷದ ಐಪಿಎಲ್ ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ಉಮ್ರಾನ್ ಮಲಿಕ್

Update: 2022-05-02 12:20 IST

ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ವೇಗಿ ಉಮ್ರಾನ್ ಮಲಿಕ್ ಈ ಋತುವಿನಲ್ಲಿ ಭರ್ಜರಿ  ಫಾರ್ಮ್‌ನಲ್ಲಿದ್ದಾರೆ ಹಾಗೂ  ತಮ್ಮ ಪ್ರದರ್ಶನದಿಂದ ಕ್ರಿಕೆಟ್ ಅಭಿಮಾನಿಗಳು, ತಜ್ಞರ ಮನ ಗೆದ್ದಿದ್ದಾರೆ. ರವಿವಾರದಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡದಿದ್ದರೂ  ಐಪಿಎಲ್ 2022 ರಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಲು ಯಶಸ್ವಿಯಾದರು. ಒಂದಲ್ಲ, ಎರಡು ಬಾರಿ ಈ ಸಾಧನೆ ಮಾಡಿದರು.

ರವಿವಾರ ನಡೆದ ಐಪಿಎಲ್ ನ  46ನೇ ಪಂದ್ಯದ ಮೊದಲ ಇನಿಂಗ್ಸ್‌ನ  10ನೇ ಓವರ್‌ನಲ್ಲಿ  ಉಮ್ರಾನ್  ಗಂಟೆಗೆ 154 ಕಿ.ಮೀ. ವೇಗದಲ್ಲಿ  ಬೌಲಿಂಗ್ ಮಾಡಿದರು. ಅವರು ಸ್ಟಂಪ್‌ ಗುರಿ ಇರಿಸಿ ಎಸೆದ ಚೆಂಡನ್ನು  ಚೆನ್ನೈ ಓಪನರ್ ಋತುರಾಜ್ ಗಾಯಕ್ವಾಡ್ ಬೌಂಡರಿಗೆ ಅಟ್ಟಿದರು.  

22ರ ಹರೆಯದ ಆಟಗಾರ ಮಲಿಕ್ ಮತ್ತೊಮ್ಮೆ 19ನೇ ಓವರ್‌ನಲ್ಲಿ ಗಂಟೆಗೆ 154 ಕಿ.ಮೀ. ವೇಗದಲ್ಲಿ ಎಂ.ಎಸ್ .ಧೋನಿಗೆ ಯಾರ್ಕರ್ ಅನ್ನು ಎಸೆದರು. ಈ ಎಸೆತದಲ್ಲಿ ಧೋನಿ ಸಿಂಗಲ್ ರನ್ ಗಳಿಸಿದರು.

ಇತ್ತೀಚಿಗೆ ಐಪಿಎಲ್ ನಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲು ಗಳಿಸಿ  ಸಾಕಷ್ಟು ಪ್ರಶಂಸೆಗಳನ್ನು ಪಡೆದಿರುವ ಮಲಿಕ್  ಮತ್ತೊಮ್ಮೆ ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

"ಈ ಋತುವಿನಲ್ಲಿ  ವೇಗವಾಗಿ ಬೌಲಿಂಗ್ ಮಾಡಿರುವ  ಉಮ್ರಾನ್ ಮಲಿಕ್ (154 ಕಿ.ಮೀ.) ಅವರು ಲಾಕಿ ಫರ್ಗುಸನ್ (153.9ಕಿ.ಮೀ.) ದಾಖಲೆಯನ್ನು ಮುರಿದರು"ಎಂದು ಓರ್ವ ಟ್ವಿಟರ್ ಬಳಕೆದಾರ ಬರೆದಿದ್ದಾರೆ.

ಉಮ್ರಾನ್ ಗಂಟೆಗೆ 154 ಕಿ.ಮಿ. ವೇಗದಲ್ಲಿ ಎಂ.ಎಸ್.ಧೋನಿಗೆ ಯಾರ್ಕರ್ ಎಸೆದರು ಎಂದು ಇನ್ನೋರ್ವ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News