ಪಂಪ್ ಆಪರೇಟರ್ ಮಗಳು ಈಗ ವಿಶ್ವ ಜೂನಿಯರ್ ವೇಟ್‍ಲಿಫ್ಟಿಂಗ್ ಚಾಂಪಿಯನ್
ಚೆನ್ನೈ: ಪುಣೆ ನಗರದ ವಡಗಾಂವ್ ಮಾವಲ್ ಟೌನ್ ಸಮೀಪದ ಗ್ರಾಮಪಂಚಾಯ್ತಿಯಲ್ಲಿ ಪಂಪ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ಗರುಡ್ ಕಂಡ ಕನಸು ಇದೀಗ ನನಸಾಗಿದೆ. ಅವರ ಪುತ್ರಿ ಹರ್ಷದಾ ಗರುಡ್ ಈಗ ವಿಶ್ವ ಜೂನಿಯರ್ ವೇಟ್‍ಲಿಫ್ಟಿಂಗ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
18ರ ವಯಸ್ಸಿನ ಹರ್ಷದಾ ಗ್ರೀಸ್‍ನ ಹೆರಾಕ್ಲಿಯಾನ್‍ನಲ್ಲಿ ನಡೆಯುತ್ತಿರುವ ಐಡಬ್ಲ್ಯುಎಫ್ ಜೂನಿಯರ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವರು ಸೋಮವಾರ ಪಾತ್ರರಾದರು. 45 ಕೆಜಿ ವಿಭಾಗದಲ್ಲಿ ಒಟ್ಟು 153 ಕೆಜಿ (70 ಕೆಜಿ + 83 ಕೆಜಿ) ಭಾರ ಎತ್ತುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿ, ಸ್ಪರ್ಧೆಯ ಆರಂಭದ ದಿನವೇ ಭಾರತದ ಪದಕದ ಖಾತೆ ತೆರೆದರು. ಸ್ಲ್ಯಾಚ್‍ನಲ್ಲಿ 70 ಕೆಜಿ ಭಾರ ಎತ್ತುವ ಮೂಲಕ ಹರ್ಷದಾ ಅಗ್ರಸ್ಥಾನಕ್ಕೇರಿದರು. ಇದಕ್ಕೂ ಮುನ್ನ ಕ್ಲೀನ್ ಮತ್ತು ಜೆರ್ಕ್ ವಿಭಾಗದಲ್ಲಿ ಅವರು ಎರಡನೇ ಸ್ಥಾನ ಗಳಿಸಿದ್ದರು. ಟರ್ಕಿಯ ಬೆಕ್ತಾಸ್ ಕ್ಯಾನ್ಸು (85) ಜೆರ್ಕ್ ನಲ್ಲಿ ಅಗ್ರಸ್ಥಾನಿಯಾಗಿದ್ದರು. ಆದರೆ ಒಟ್ಟಾರೆಯಾಗಿ 150 ಕೆಜಿ ಭಾರ ಎತ್ತುವ ಮೂಲಕ ಕ್ಯಾನ್ಸು ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಐದು ವರ್ಷದ ಹಿಂದೆ ತನ್ನ 13 ವರ್ಷದ ಮಗಳು 50 ಕೆಜಿ ಅಕ್ಕಿ ಮೂಟೆಯನ್ನು ಅನಾಯಾಸವಾಗಿ ಎಳೆದದ್ದನ್ನು ಕಂಡ ಗರುಡ್, ಮಗಳು ಭಾರ ಎತ್ತುವ ಸ್ಪರ್ಧೆಯಲ್ಲಿ ಚಾಂಪಿಯನ್ ಆಗುವ ಕನಸು ಕಂಡಿದ್ದರು. ರಾಜ್ಯಮಟ್ಟದ ಶಾಲಾ ಗೇಮ್ಸ್ ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಹರ್ಷದಾ ಬಳಿಕ ಹಣಕಾಸು ತೊಂದರೆಯ ಕಾರಣದಿಂದ ಕ್ರೀಡೆ ತ್ಯಜಿಸಿದ್ದರು.
ವೃತ್ತಿಯಲ್ಲಿ ಪಂಪ್ ಆಪರೇಟರ್ ಆಗಿರುವ ಗರುಡ್, ತಮ್ಮ ಮಗಳ ಬಗ್ಗೆ ದೊಡ್ಡ ಕನಸು ಕಂಡಿದ್ದರು. ತಕ್ಷಣವೇ ಬಾಲಕಿಯನ್ನು ದುಬೇಸ್ ಗುರುಕುಲಕ್ಕೆ ಸೇರಿಸಿದರು. ಅಲ್ಲಿ ಕೋಚ್ ಬಿಹಾರಿಲಾಲ್ ದುಬೆ ಮಾರ್ಗದರ್ಶನದಲ್ಲಿ ಕ್ಷಿಪ್ರ ಅವಧಿಯಲ್ಲೇ ದೊಡ್ಡ ಸಾಧನೆ ಮಾಡಿದಳು. 2020ರ ಖೇಲೊ ಇಂಡಿಯಾ ಗೇಮ್ಸ್ ನಲ್ಲಿ ಹರ್ಷದಾ ಚಿನ್ನದ ಪದಕ ಗಳಿಸಿದರು. ಇದು ಎನ್‍ಐಎಸ್ ಪಾಟಿಯಾಲಾದಲ್ಲಿ ರಾಷ್ಟ್ರೀಯ ಶಿಬಿರಕ್ಕೆ ಅವರ ಸ್ಥಾನ ಖಚಿತಪಡಿಸಿತು. ಇದು ಬಾಲಕಿಗೆ ತಮ್ಮ ಕ್ಷಮತೆಯನ್ನು ಗಣನೀಯವಾಗಿ ಸುಧಾರಿಸಿಕೊಳ್ಳಲು ನೆರವಾಯಿತು. ಅತ್ಯಂತ ಪ್ರಮುಖ ಅಂಶವೆಂದರೆ ಅಲ್ಲಿ ಆಕೆ ಪಡೆಯುತ್ತಿದ್ದ ಆಹಾರ ಕ್ರಮ ಆಕೆಯ ನೆರವಿಗೆ ಬಂತು ಎಂದು ಕೋಚ್ ದುಬೆ ವಿವರಿಸಿದರು.
ತಂದೆ ಗರುಡ್ ಮಗಳ ಬಗ್ಗೆ ಕನಸು ಕಂಡಿದ್ದರೂ ಬಾಲಕಿಯನ್ನು ಭಾರ ಎತ್ತುವ ಕ್ರೀಡೆಗೆ ಆಯ್ಕೆ ಮಾಡುವ ಮುನ್ನ ಕೋಚ್ ಆಕೆಯ ಕೌಶಲವನ್ನು ಪರೀಕ್ಷಿಸಿದ್ದರು. ಬಾಲಕಿಯ ಸಾಧನೆ ಹೆಮ್ಮೆ ತಂದಿದೆ ಎಂದು ಕೋಚ್ ಹೇಳಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾಬಾಯಿ ಚಾನು 2013ರಲ್ಲಿ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಕಳೆದ ವರ್ಷ ಭಾರತದ ಅಚಿಂತಾ ಶೇವ್ಲಿ ಇದೇ ಸ್ಪರ್ಧೆಯಲ್ಲಿ ಬೆಳ್ಳಿಪದಕ ಪಡೆದಿದ್ದರು. ಹರ್ಷದಾ ಚಿನ್ನದ ಸಾಧನೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಕಿರಿಯರ ವೇಟ್‍ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡರು.
ಪುತ್ರಿಯ ಅಮೋಘ ಸಾಧನೆಯಿಂದ ಖುಷಿಯಾಗಿರುವ ಗರುಡ್, "ಆಕೆಯ ದೇಹ ಸಂರಚನೆಯೇ ಭಿನ್ನ. ಈ ಅದೃಷ್ಟದ ದಿನ ಆಕೆ ವೇಟ್‍ಲಿಫ್ಟಿಂಗ್‍ನಲ್ಲಿ ದೊಡ್ಡ ಸಾಧನೆ ಮಾಡುತ್ತಾಳೆ ಎನ್ನುವುದು ಖಾತ್ರಿಯಾಗಿದೆ" ಎಂದು ಹೇಳಿದರು.