ಉಕ್ರೇನ್: ಬಾಲಕರ ಮೇಲೆ ರಶ್ಯ ಯೋಧರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ ವಿಶ್ವಸಂಸ್ಥೆ

Update: 2022-05-04 18:40 GMT

ಶ್ವಸಂಸ್ಥೆ ವಿಶ್ವಸಂಸ್ಥೆ, ಮೇ 4: ಉಕ್ರೇನ್ನಲ್ಲಿ ರಶ್ಯದ ಯೋಧರು ಪುರುಷರು ಮತ್ತು ಬಾಲಕರ ಮೇಲೆ ಅತ್ಯಾಚಾರ ಎಸಗಿರುವ ಆರೋಪವಿದೆ ಎಂದು ವಿಶ್ವಸಂಸ್ಥೆ ಹಾಗೂ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತ ವರದಿ ತನ್ನ ಕೈಸೇರಿದೆ. ಆದರೆ ವರದಿಯನ್ನು ಇನ್ನೂ ಪರಿಶೀಲಿಸಿಲ್ಲ . ಪುರುಷ ಅತ್ಯಾಚಾರಿ ಸಂತ್ರಸ್ತರಿಗೆ ತಮ್ಮ ಮೇಲಿನ ಅಪರಾಧದ ಬಗ್ಗೆ ದೂರು ನೀಡುವುದು ಅತ್ಯಂತ ಸವಾಲಿನ ಕಾರ್ಯವಾಗಿದೆ ಎಂದು ಯುದ್ಧದ ಸಂದರ್ಭ ಅತ್ಯಾಚಾರವನ್ನು ಕೊನೆಗೊಳಿಸುವ ಉದ್ದೇಶದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಪ್ರಮೀಳಾ ಪ್ಯಾಟನ್ ಹೇಳಿದ್ದಾರೆ.ಕಳಂಕದ ಭೀತಿ ಸಹಿತ ಇತರ ಕೆಲವು ಕಾರಣಗಳಿಂದಾಗಿ ಮಹಿಳಾ ಸಂತ್ರಸ್ತರಿಗೆ ತಮ್ಮ ಮೇಲಿನ ಅತ್ಯಾಚಾರದ ಬಗ್ಗೆ ದೂರು ನೀಡಲು ಕಷ್ಟವಾಗುತ್ತದೆ. ಆದರೆ ಪುರುಷರಿಗೆ ಇದು ಇನ್ನಷ್ಟು ಕಠಿಣ ಸವಾಲಾಗುತ್ತದೆ. ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡುವ ಸಂತ್ರಸ್ತರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದವರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
 

ಹಲವು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಪುರುಷರು ಮತ್ತು ಬಾಲಕರ ಅಗತ್ಯಗಳಿಗೆ ಸ್ಪಂದಿಸುವ ಸೇವೆಯ ಕೊರತೆಯನ್ನು ಮನಗಂಡಿದ್ದು ಇಂತಹ ಸೇವೆಯನ್ನು ಖಾತರಿಪಡಿಸಲು ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿರುವುದಾಗಿ ಅವರು ಹೇಳಿದ್ದಾರೆ. ಅತ್ಯಾಚಾರ ಸಂತ್ರಸ್ತರು ಹಿಂಜರಿಕೆ ಬಿಟ್ಟು ಮುಂದೆ ಬಂದು ದೂರು ನೀಡಬೇಕು. ಅಂತರಾಷ್ಟ್ರೀಯ ಕಾನೂನು ಎಂಬುದು ಪೊಳ್ಳು ಭರವಸೆಯಲ್ಲ. ಇವತ್ತು ದೂರು ನೀಡಿದರೆ ನಾಳೆ ಶಿಕ್ಷೆಯಾಗಬಹುದು. ಯುದ್ಧ ಆರಂಭಗೊಂಡೊಡನೆ ನಿಮ್ಮ ಹಕ್ಕುಗಳು ಕೊನೆಯಾದವು ಎಂದು ಭಾವಿಸಬಾರದು ಎಂದ ಪ್ರಮೀಳಾ ಪ್ಯಾಟನ್, ಯುದ್ಧ ಆರಂಭಗೊಂಡೊಡನೆ ಮಹಿಳೆಯರ ಹಕ್ಕು ಅಂತ್ಯವಾಗುವುದಿಲ್ಲ. ನಿಮ್ಮ ದೇಹವು ಯುದ್ಧರಂಗವಲ್ಲ ಮತ್ತು ಅದು ಯುದ್ಧರಂಗದ ಭಾಗ ಎಂದು ಪರಿಗಣಿಸಬಾರದು ಎಂದು ಹೇಳಿದರು.

  ಸುದ್ಧಿಗೋಷ್ಟಿಯಲ್ಲಿ ಉಪಸ್ಥಿತರಿದ್ದು ಉಕ್ರೇನ್ನ ಉಪಪ್ರಧಾನಿ ಓಲ್ಹಾ ಸ್ಟೆಫಾನಿಶಿನಾ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯದ ಯೋಧರು ಬಾಲಕರ ಮತ್ತು ಪುರುಷರ ಮೇಲೆಯೂ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿದ್ದಾರೆ. ಅತ್ಯಾಚಾರವು ಯುದ್ಧದಲ್ಲಿ ಅತ್ಯಂತ ಮೌನರೂಪದ ಅಪರಾಧವಾಗಿದೆ. ಆದ್ದರಿಂದ ಸರಿಯಾದ ಅಂಕಿಅಂಶ ಸಂಗ್ರಹಿಸುವುದು ಕಷ್ಟದ ಕೆಲಸ ಎಂದರು.ಶರಣಾಗುವಂತೆ ಉಕ್ರೇನ್ ಮೇಲೆ ಒತ್ತಡ ಹಾಕಲು ಅವರು (ರಶ್ಯನ್ನರು) ಎಲ್ಲಾ ತಂತ್ರಗಳನ್ನೂ ನಡೆಸುತ್ತಿದ್ದಾರೆ. ನಾಗರಿಕರನ್ನು ಬೆದರಿಸುವುದು ಇದರಲ್ಲಿ ಒಂದು ಅಂಶವಾಗಿದೆ. ಅತ್ಯಾಚಾರವನ್ನು ಉದ್ದೇಶಪೂರ್ವಕವಾಗಿ ತನ್ನ ಕಾರ್ಯಯೋಜನೆಯಲ್ಲಿ ರಶ್ಯ ಸೇರಿಸಿಕೊಂಡಿದೆ ಎಂದು ಉಕ್ರೇನ್ನ ಪ್ರಾಸಿಕ್ಯೂಟರ್ ಜನರಲ್ ಇರಿನಾ ವೆನೆಡಿಕ್ಟೋವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News