ಈ ವರ್ಷದ ಐಪಿಎಲ್ ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ಉಮ್ರಾನ್ ಮಲಿಕ್
ಮುಂಬೈ: ಸನ್‌ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ ಅವರ ಫಾರ್ಮ್ ಕಳೆದೆರಡು ಪಂದ್ಯಗಳಲ್ಲಿ ಕುಸಿದಿರಬಹುದು. ಆದಾಗ್ಯೂ, ಅವರ ವೇಗ ಖಂಡಿತವಾಗಿಯೂ ಕಡಿಮೆಯಾಗಿಲ್ಲ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಳೆದೆರಡು ಪಂದ್ಯಗಳಲ್ಲಿ ಅವರು ವಿಕೆಟ್ ಪಡೆಯಲು ವಿಫಲರಾಗಿದ್ದಾರೆ. ಭಾರತೀಯ ವೇಗದ ಬೌಲರ್ ತನ್ನ ವೇಗದಿಂದ ಅಭಿಮಾನಿಗಳನ್ನು ಆಕರ್ಷಿಸುವುದನ್ನು ಮುಂದುವರೆಸಿದ್ದಾರೆ.
ಮಲಿಕ್ ಗಂಟೆಗೆ 150-155 ಕಿ.ಮೀ. ವ್ಯಾಪ್ತಿಯಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುತ್ತಾರೆ ಹಾಗೂ ಈ ವರ್ಷದ ಟೂರ್ನಿಯಲ್ಲಿ ಅವರು ಆಡಿದ ಬಹುತೇಕ ಎಲ್ಲಾ ಪಂದ್ಯಗಳಲ್ಲಿ, ವೇಗದ ಎಸೆತಕ್ಕಾಗಿ ನೀಡುವ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ, ಉಮ್ರಾನ್ ಈಗ ನಡೆಯುತ್ತಿರುವ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದಾರೆ. ಈ ಮೂಲಕ ತನ್ನದೇ ಹಿಂದಿನ ದಾಖಲೆಯನ್ನು ಮುರಿದರು.
ದಿಲ್ಲಿ ವಿರುದ್ದ ಕೊನೆಯ ಓವರ್‌ನ ನಾಲ್ಕನೇ ಎಸೆತದಲ್ಲಿ, ಉಮ್ರಾನ್ ಗಂಟೆಗೆ 157 ಕಿಮೀ. ವೇಗದಲ್ಲಿ ರೋವ್‌ಮನ್ ಪೊವೆಲ್‌ಗೆ ಬೌಲಿಂಗ್ ಮಾಡಿದರು. ಇದರೊಂದಿಗೆ ಈಗ ನಡೆಯುತ್ತಿರುವ ಐಪಿಎಲ್ ನಲ್ಲಿ ವೇಗವಾಗಿ ಬೌಲಿಂಗ್ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ವೇಗವಾಗಿ ಬಂದ ಚೆಂಡನ್ನು ಪೊವೆಲ್ ಬೌಂಡರಿ ಗೆರೆ ದಾಟಿಸಿದರು.
ಉಮ್ರಾನ್ ಈ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅತ್ಯುತ್ತಮ ಬೌಲಿಂಗ್ (5-25 ) ಮಾಡಿದ್ದರು. 10 ಪಂದ್ಯಗಳಲ್ಲಿ 15 ವಿಕೆಟ್ ಗಳನ್ನು ಪಡೆದಿದ್ದಾರೆ. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆದಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ, 22 ವರ್ಷ ವಯಸ್ಸಿನ ಮಲಿಕ್ ಅವರು 48 ರನ್‌ಗಳನ್ನು ಬಿಟ್ಟುಕೊಟ್ಟರು ಹಾಗೂ ದಿಲ್ಲಿ ವಿರುದ್ಧದ ಪಂದ್ಯದಲ್ಲಿ, ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 52 ರನ್‌ಗಳನ್ನು ನೀಡಿದ್ದರು.
— Jemi_forlife (@jemi_forlife) May 5, 2022