ಐಪಿಎಲ್: ಗುಜರಾತ್ ಮಣಿಸಿದ ಮುಂಬೈ ಇಂಡಿಯನ್ಸ್

Update: 2022-05-06 17:58 GMT
Photo:twitter

ಮುಂಬೈ, ಮೇ 6: ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಹಾ ಹಾಗೂ ಶುಭಮನ್ ಗಿಲ್ ಅರ್ಧಶತಕದ ಹೊರತಾಗಿಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್‌ನ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 5 ರನ್‌ಗಳ ಅಂತರದಿಂದ ಸೋಲುಂಡಿದೆ.

 ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 178 ರನ್ ಗುರಿ ಬೆನ್ನಟ್ಟಿದ ಗುಜರಾತ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು. 11 ಪಂದ್ಯಗಳಲ್ಲಿ 8ರಲ್ಲಿ ಜಯ ಹಾಗೂ 3ರಲ್ಲಿ ಸೋಲನುಭವಿಸಿರುವ ಗುಜರಾತ್ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. 10 ಪಂದ್ಯಗಳಲ್ಲಿ 2ನೇ ಬಾರಿ ಗೆಲುವು ದಾಖಲಿಸಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ವೃದ್ಧಿಮಾನ್ ಸಹಾ(55 ರನ್, 40 ಎಸೆತ, 6 ಬೌಂಡರಿ, 2 ಸಿಕ್ಸರ್)ಹಾಗೂ ಶುಭಮನ್ ಗಿಲ್(52 ರನ್, 36 ಎಸೆತ, 6 ಬೌಂಡರಿ, 2 ಸ್ಸಿಕರ್)12.1 ಓವರ್‌ಗಳಲ್ಲಿ 106 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು. ಹಾರ್ದಿಕ್ ಪಾಂಡ್ಯ(24 ರನ್), ಸಾಯಿ ಸುದರ್ಶನ್(14 ರನ್), ಡೇವಿಡ್ ಮಿಲ್ಲರ್(ಔಟಾಗದೆ 19 ರನ್) ಹಾಗೂ ರಾಹುಲ್ ತೆೆವಾಟಿಯಾ(3)ಎರಡಂಕೆಯ ಸ್ಕೋರ್ ಗಳಿಸಿದರು.

 
 
ಮುಂಬೈ ಪರ ಎಂ.ಮುರುಗನ್(2-29) ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 21 ಎಸೆತಗಳಲ್ಲಿ ಔಟಾಗದೆ 44 ರನ್(2 ಬೌಂಡರಿ, 4 ಸಿಕ್ಸರ್) ಗಳಿಸಿದ ಟಿಮ್ ಡೇವಿಡ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ(43 ರನ್, 28 ಎಸೆತ, 5 ಬೌಂಡರಿ, 2 ಸಿಕ್ಸರ್)ಹಾಗೂ ಇಶಾನ್ ಕಿಶನ್(45 ರನ್, 29 ಎಸೆತ, 5 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್ ಜೊತೆಯಾಟದಲ್ಲಿ 74 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ಮುಂಬೈ ಎಂದಿನಂತೆ ಕುಸಿತದ ಹಾದಿ ಹಿಡಿಯಿತು. ಸೂರ್ಯಕುಮಾರ್ ಯಾದವ್(13), ಇಶಾನ್ ಕಿಶನ್, ಕಿರೊನ್ ಪೊಲಾರ್ಡ್(4ರನ್), ತಿಲಕ್ ವರ್ಮಾ(21ರನ್)ಬೇಗನೆ ಔಟಾದರು.

ತಿಲಕ್ ವರ್ಮಾ ಔಟಾಗುವ ಮೊದಲು ಡೇವಿಡ್‌ರೊಂದಿಗೆ 5ನೇ ವಿಕೆಟ್‌ಗೆ 37 ರನ್ ಜೊತೆಯಾಟ ನಡೆಸಿದರು. ಗುಜರಾತ್ ಟೈಟಾನ್ಸ್ ಪರವಾಗಿ ಅಲ್ಝಾರಿ ಜೋಸೆಫ್(1-41), ಲಾಕಿ ಫರ್ಗ್ಯುಸನ್(1-34) ಹಾಗೂ ಪ್ರದೀಪ್ ಸಾಂಗ್ವಾನ್(1-23) ತಲಾ ಒಂದು ವಿಕೆಟ್‌ಗಳನ್ನು ಪಡೆದರು. ಸ್ಪಿನ್ನರ್ ರಶೀದ್ ಖಾನ್(2-24) ಎರಡು ವಿಕೆಟ್ ಪಡೆದು ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News