ಉಕ್ರೇನ್ನಲ್ಲಿ ರಶ್ಯದಿಂದ ಮಾತೃಭೂಮಿಯ ರಕ್ಷಣೆ: ಪುಟಿನ್

Update: 2022-05-09 18:33 GMT

 ಮಾಸ್ಕೊ, ಮೇ 9: ಉಕ್ರೇನ್ನಲ್ಲಿ ಮಾತೃಭೂಮಿಯ ರಕ್ಷಣೆಯಲ್ಲಿ ನಿರತವಾಗಿರುವ ರಶ್ಯದ ಪಡೆಗಳಿಗೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ಬೆದರಿಕೆ ಎದುರಾಗಿದೆ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ನಾಝಿ ಜರ್ಮನಿಯ ಎದುರು ಸೋವಿಯತ್ ಒಕ್ಕೂಟದ ಗೆಲುವಿನ ವಾರ್ಷಿಕೋತ್ಸವ ವಿಜಯ ದಿನದ ಅಂಗವಾಗಿ ಮಾಸ್ಕೊದ ರೆಡ್ಸ್ಕ್ವೇರ್ (ಕೆಂಪು ವೃತ್ತ)ನಲ್ಲಿ ನಡೆದ ಸೇನಾ ಕವಾಯತು ಅನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಪುಟಿನ್, ಉಕ್ರೇನ್ನಲ್ಲಿ ರಶ್ಯದ ಸೇನೆ ಮಾತೃಭೂಮಿಯ ರಕ್ಷಣೆಗಾಗಿ ಹೋರಾಡುತ್ತಿದೆ. ಈ ಸಂಘರ್ಷವು 2ನೇ ವಿಶ್ವಯುದ್ಧದ ಮುಂದುವರಿಕೆಯಾಗಿದೆ ಎಂದರು. ಉಕ್ರೇನ್ ವಿರುದ್ಧದ ರಶ್ಯದ ಆಕ್ರಮಣವನ್ನು ಸಮರ್ಥಿಸಿಕೊಂಡ ಅವರು ಸಂಘರ್ಷದ ಸ್ಥಿತಿ ನಿರ್ಮಾಣವಾಗಲು ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳು ಕಾರಣ ಎಂದು ದೂಷಿಸಿದರು.

 ಬಳಿಕ ಉಕ್ರೇನ್ನಲ್ಲಿ ಯುದ್ಧದಲ್ಲಿ ತೊಡಗಿರುವ ರಶ್ಯ ಯೋಧರನ್ನು ಉಲ್ಲೇಖಿಸಿ ಮಾತನಾಡಿದ ಅವರು ‘ ನೀವು ಮಾತೃಭೂಮಿಗಾಗಿ, ಅದರ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೀರಿ. ಈ ಮೂಲಕ 2ನೇ ವಿಶ್ವಯುದ್ಧದ ಪಾಠವನ್ನು ಯಾರೂ ಮರೆಯಬಾರದು ಎಂಬ ಸಂದೇಶ ರವಾನಿಸುತ್ತಿದ್ದೀರಿ ಎಂದರು. ತನ್ನ ಭಾಷಣದಲ್ಲಿ ಹಲವು ಬಾರಿ ಉಕ್ರೇನ್ನ ಆಡಳಿತವನ್ನು ನವ-ನಾಝಿಗಳು ಎಂದು ಉಲ್ಲೇಖಿಸಿದ ಅವರು, ಅಲ್ಲಿ ರಶ್ಯದ ಸೇನೆ ಮಹಾ ದೇಶಭಕ್ತಿಯ ಯುದ್ಧದಲ್ಲಿ ತೊಡಗಿದೆ ಎಂದರು. ಉಕ್ರೇನ್ನಲ್ಲಿ ನಮ್ಮ ಸೇನೆ ವಿಶೇಷ ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ ಉಕ್ರೇನ್ ಮತ್ತು ಅದರ ಪಶ್ಚಿಮದ ಮಿತ್ರರಾಷ್ಟ್ರಗಳು ನಮ್ಮ ಐತಿಹಾಸಿಕ ಭೂಮಿಯ ಮೇಲೆ ಆಕ್ರಮಣಕ್ಕೆ ಮುಂದಾಗಿದೆ. ಖಂಡಿತಾ ಸ್ವೀಕಾರಾರ್ಹವಲ್ಲದ ಬೆದರಿಕೆಯನ್ನು ನಮ್ಮ ಗಡಿಯ ಮೇಲೆ ನೇರವಾಗಿ ಒಡ್ಡಲಾಗಿದೆ ಎಂದು ನೇಟೊ ದೇಶಗಳು ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಸುವುದನ್ನು ಪರೋಕ್ಷವಾಗಿ ಉಲ್ಲೇಖಿಸಿ ಪುಟಿನ್ ಹೇಳಿದರು.
ರಶ್ಯಕ್ಕೆ ಪೂರ್ವಭಾವಿ ಪ್ರತಿಕ್ರಿಯೆ ನೀಡದೆ ಬೇರೆ ಆಯ್ಕೆಯೇ ಇರಲಿಲ್ಲ. ಸಾರ್ವಭೌಮ, ಬಲಿಷ್ಟ ಮತ್ತು ಸ್ವತಂತ್ರ ದೇಶಕ್ಕೆ ಇದು ಸೂಕ್ತ ನಿರ್ಧಾರವಾಗಿತ್ತು. ಸಂಘರ್ಷ ಮುಂದುವರಿಸಿಕೊಂಡು ಹೋಗಲು ರಶ್ಯ ಬಯಸುವುದಿಲ್ಲ. ವಿಶ್ವ ಯುದ್ಧದ ಭೀತಿ ಮತ್ತೆ ಎದುರಾಗದಂತೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುವುದು ಅಗತ್ಯವಾಗಿದೆ. ಕಾರ್ಯಾಚರಣೆಯಲ್ಲಿ ಮೃತಪಟ್ಟ ಯೋಧರ ಕುಟುಂಬಕ್ಕೆ ಸರಿಪಡಿಸಲಾಗದ ಹಾನಿಯಾಗಿದೆ ಎಂಬ ಅರಿವು ಸರಕಾರಕ್ಕೆ ಇದೆ. ಮೃತ ಯೋಧರ ಕುಟುಂಬಕ್ಕೆ ಸರಕಾರ ಸಂಪೂರ್ಣ ನೆರವು ನೀಡಲಿದೆ ಎಂದವರು ಘೋಷಿಸಿದರು.
 

ವಿಜಯ ದಿನದ 77ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ರೆಡ್ ಸ್ಕ್ವೇರ್ ನಲ್ಲಿ ನಡೆದ ಸೇನಾ ಪಥಸಂಚಲನದಲ್ಲಿ ಸುಮಾರು 11,000 ಯೋಧರು ಮತ್ತು 130ಕ್ಕೂ ಅಧಿಕ ಸೇನಾ ವಾಹನಗಳು ಪಾಲ್ಗೊಂಡಿದ್ದವು. ವಾಯುಪಡೆಯ ಪ್ರಾತ್ಯಕ್ಷಿಕೆಯನ್ನು ಕೆಟ್ಟ ಹವಾಮಾನದ ಕಾರಣ ರದ್ದುಗೊಳಿಸಲಾಯಿತು. ರಕ್ಷಣಾ ಸಚಿವ ಸೆರ್ಗೈ ಶೊಯಿಗು, ರಶ್ಯ ಭೂಸೇನೆಯ ಮುಖ್ಯ ಕಮಾಂಡರ್ ಒಲೆಗ್ ಸಲ್ಯುಕೊವ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News