×
Ad

ನೀರಿನ ಮಟ್ಟ ಕುಗ್ಗುತ್ತಿದ್ದಂತೆಯೇ ಜಲಾಶಯದಲ್ಲಿ ಮತ್ತಷ್ಟು ಮಾನವ ದೇಹಗಳ ಅವಶೇಷ ಪತ್ತೆ !

Update: 2022-05-10 22:53 IST
Editor : Saleeth Sufiyan
photo:twitter/@nypost

ವಾಷಿಂಗ್ಟನ್, ಮೇ 10: ನೀರಿನ ಮಟ್ಟ ತೀವ್ರವಾಗಿ ಕುಗ್ಗುತ್ತಿರುವ ಮೀಡ್ ಜಲಾಶಯದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾದ ಬೆನ್ನಿಗೇ ಜಲಾಶಯದಲ್ಲಿ ಮತ್ತಷ್ಟು ಮಾನವ ಅವಶೇಷ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಜಲಾಶಯದಲ್ಲಿ ದೋಣಿ ಸಂಚಾರ ಮಾಡುತ್ತಿದ್ದ ಇಬ್ಬರು ಸಹೋದರಿಯರು ಎಲುಬುಗಳನ್ನು ಪತ್ತೆಹಚ್ಚಿದರು. ಇದು ಕುರಿಯ ಎಲುಬುಗಳಾಗಿರಬಹುದು ಎಂದು ಅವರು ಆರಂಭದಲ್ಲಿ ಭಾವಿಸಿದ್ದರು. ಆದರೆ ದವಡೆಯ ಎಲುಬು ಕೂಡಾ ಕಂಡುಬಂದದ್ದರಿಂದ ಇದು ಮಾನವ ಅವಶೇಷ ಎಂದು ತಿಳಿಯಿತು. ತಕ್ಷಣ ನ್ಯಾಷನಲ್ ಪಾರ್ಕ್ ಸರ್ವಿಸ್ ವಿಭಾಗವನ್ನು ಸಂಪರ್ಕಿಸಿದರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಜಲಾಶಯಕ್ಕೆ ಹೊಂದಿಕೊಂಡಿರುವ ಕ್ಯಾಲ್ವಿಲೆ ಕೊಲ್ಲಿ ಪ್ರದೇಶದಿಂದ ಮಾನವ ಅವಶೇಷಗಳನ್ನು ಸಂಗ್ರಹಿಸಿದ್ದಾರೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

ಇದನ್ನು ಮಾನವ ಹತ್ಯೆ ಪ್ರಕರಣವೆಂದು ತನಿಖೆ ನಡೆಸುವುದಿಲ್ಲ ಎಂದು ಲಾಸ್ವೆಗಾಸ್ ಪೊಲೀಸರು ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
 
ಸಾವಿನ ಕಾರಣ ದೃಢಪಡಿಸಲು ಕ್ಲಾರ್ಕ್ ಕೌಂಟಿ ವೈದ್ಯಕೀಯ ಪರಿವೀಕ್ಷಕರು ನೆರವಾಗಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವಾರ ಜಲಾಶಯದ ಕೆಸರಿನಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿತ್ತು. ಇದು 1970 ಅಥವಾ 1980ರಲ್ಲಿ ಗುಂಡೇಟಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವಾಗಿದ್ದು ಮೃತವ್ಯಕ್ತಿ ಧರಿಸಿದ್ದ ಬಟ್ಟೆ ಮತ್ತು ಶೂಗಳ ಆಧಾರದಲ್ಲಿ ಕಾಲವನ್ನು ನಿರ್ಧರಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 

ಮೀಡ್ ಜಲಾಶಯ ಅಮೆರಿಕದ ಬೃಹತ್ ಜಲಾಶಯವಾಗಿದ್ದು ಲಾಸ್ವೆಗಾಸ್ನಿಂದ ಲಾಸ್ಏಂಜಲೀಸ್ವರೆಗಿನ 20 ಮಿಲಿಯನ್ ಜನರಿಗೆ ಇಲ್ಲಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. 2000ನೇ ಇಸವಿಯಿಂದ ನೀರಿನ ಮಟ್ಟ ಕುಸಿಯುತ್ತಿದ್ದು , ಹವಾಮಾನ ವೈಪರೀತ್ಯದ ಸಮಸ್ಯೆಯಿಂದ ಜಲಾಶಯ ಬರಿದಾಗುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Writer - Saleeth Sufiyan

Audience Development & Tech

Editor - Saleeth Sufiyan

Audience Development & Tech

Similar News