ಬ್ರಿಟನ್‌ನ ಮಾಜಿ ಲೈಟ್-ವೆಲ್ಟರ್‌ವೇಟ್ ವಿಶ್ವ ಚಾಂಪಿಯನ್ ಅಮೀರ್ ಖಾನ್ ನಿವೃತ್ತಿ

Update: 2022-05-13 15:43 GMT
PHOTO:TWITTER

ಲಂಡನ್, ಮೇ 13: ಬ್ರಿಟನ್‌ನ ಮಾಜಿ ಲೈಟ್-ವೆಲ್ಟರ್‌ವೇಟ್ ವಿಶ್ವ ಚಾಂಪಿಯನ್ ಅಮೀರ್ ಖಾನ್ ಶುಕ್ರವಾರ ಬಾಕ್ಸಿಂಗ್‌ನಿಂದ ನಿವೃತ್ತಿ ಘೋಷಿಸಿದರು.

2004ರ ಅಥೆನ್ಸ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ತನ್ನ 17ನೇ ವಯಸ್ಸಿನಲ್ಲಿಯೇ ಬೆಳ್ಳಿ ಪದಕ ಜಯಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದ ಅಮೀರ್ ಖಾನ್ 2009 ರಲ್ಲಿ ಉಕ್ರೇನಿಯದ ಆಂಡ್ರಿ ಕೊಟೆಲ್ನಿಕ್ ಅವರಿಂದ ಡಬ್ಲು ಬಿಎ ಲೈಟ್-ವೆಲ್ಟರ್ ಬೆಲ್ಟ್ ಅನ್ನು ಗೆದ್ದುಕೊಂಡರು. 2011ರಲ್ಲಿ ಅವರು ಅಮೆರಿಕದ ಝಾಬ್ ಜುದಾ ಅವರನ್ನು ಸೋಲಿಸಿ ಐಬಿಎಫ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.

40 ಬಾಕ್ಸಿಂಗ್ ಸ್ಪರ್ಧೆಗಳಲ್ಲಿ 34 ಬಾರಿ ಜಯ ಸಾಧಿಸಿ ದಾಖಲೆ ನಿರ್ಮಿಸಿರುವ ಅಮೀರ್ ಕೇವಲ 6 ಬಾರಿ ಸೋತಿದ್ದಾರೆ. ಫೆಬ್ರವರಿಯಲ್ಲಿ ದೀರ್ಘಕಾಲದ ಪ್ರತಿಸ್ಪರ್ಧಿ ತಮ್ಮದೇ ದೇಶದ ಕೆಲ್ ಬ್ರೂಕ್ ವಿರುದ್ಧ ಸೋತಿದ್ದರು. ಬ್ರೂಕ್ ಕಳೆದ ವಾರ ಮ್ಯಾಂಚೆಸ್ಟರ್‌ನಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು.

‘‘ನಾನು ನಿವೃತ್ತಿ ಪ್ರಕಟಿಸುವ ಸಮಯ ಬಂದಿದೆ. ದೇವರ ದಯೆಯಿಂದ 27 ವರ್ಷಗಳ ಕಾಲ ಬಾಕ್ಸಿಂಗ್ ವೃತ್ತಿಯಲ್ಲಿ ಕಳೆಯುವ ಅವಕಾಶ ಲಭಿಸಿದೆ’’ಎಂದು 2005ರಲ್ಲಿ ವೃತ್ತಿಪರ ಬಾಕ್ಸರ್ ಆಗಿ ಪರಿವರ್ತಿತರಾದ 35ರ ಹರೆಯದ ಅಮೀರ್ ಖಾನ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News