ಪುರುಷರ ಬ್ಯಾಡ್ಮಿಂಟನ್; ಥಾಮಸ್ ಕಪ್ ಫೈನಲ್‍ಗೆ ಭಾರತ

Update: 2022-05-14 02:13 GMT

ಹೊಸದಿಲ್ಲಿ: ಪ್ರಬಲ ಡೆನ್ಮಾರ್ಕ್ ವಿರುದ್ಧದ ರೋಚಕ ಹೋರಾಟದಲ್ಲಿ 3-2 ಜಯ ಸಾಧಿಸಿದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಥಾಮಸ್ ಕಪ್ ಫೈನಲ್ ತಲುಪಿ ಇತಿಹಾಸ ಸೃಷ್ಟಿಸಿದೆ.

ಥಾಯ್ಲೆಂಡ್‍ನಲ್ಲಿ ನಡೆದ ಸೆಮಿಫೈನಲ್‍ನಲ್ಲಿ ಉದಯೋನ್ಮುಖ ತಾರೆ ಎಚ್.ಎಸ್.ಪ್ರಣಯ್, ನಿರ್ಣಾಯಕವಾಗಿದ್ದ ಐದನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿ, ಮೊಟ್ಟಮೊದಲ ಬಾರಿಗೆ ಈ ಪ್ರತಿಷ್ಠಿತ ಟೂರ್ನಿಯ ಫೈನಲ್ ತಲುಪಲು ಭಾರತಕ್ಕೆ ನೆರವಾದರು.

1979ರಿಂದ ಭಾರತ ತಂಡ ಸೆಮಿಫೈನಲ್‍ನಿಂದ ಮುಂದೆ ತಲುಪಿದ ನಿದರ್ಶನ ಇಲ್ಲ. ಆದರೆ 2016ರ ಚಾಂಪಿಯನ್ ತಂಡವನ್ನು ಬಗ್ಗುಬಡಿದ ಭಾರತೀಯ ತಂಡ ಶುಕ್ರವಾರ ಐತಿಹಾಸಿಕ ಸಾಧನೆ ಮಾಡಿತು.

ವಿಶ್ವಚಾಂಪಿಯನ್‍ ಶಿಪ್‍ನಲ್ಲಿ ಬೆಳ್ಳಿಪದಕ ಗೆದ್ದಿದ್ದ ಕಿಡಂಬಿ ಶ್ರೀಕಾಂತ್ ಮತ್ತು ವಿಶ್ವದ ನಂಬರ್ 8 ಡಬಲ್ಸ್ ಜೋಡಿ ಸಾತ್ವಿಕ್‍ ರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾರತದ ಹೋರಾಟ ಸಂಘಟಿಸಿದರು. ಆದರೆ ಉಭಯ ತಂಡಗಳ ನಡುವೆ 2-2 ಸಮಬಲ ಸೃಷ್ಟಿಯಾದ ಹಂತದಲ್ಲಿ ನಿರ್ಣಾಯಕ ಐದನೇ ಪಂದ್ಯದಲ್ಲಿ ವಿಶ್ವದ 13ನೇ ಕ್ರಮಾಂಕದ ಆಟಗಾರ ರಸ್ಮಸ್ ಗೇಮ್ಕೆ ನಡುವಿನ ಸೆಣಸಾಟದಲ್ಲಿ ಪ್ರಣಯ್ ಹಿಮ್ಮಡಿ ಗಾಯಕ್ಕೆ ತುತ್ತಾದರು. ವೈದ್ಯಕೀಯ ವಿರಾಮದ ಬಳಿಕ ತಮ್ಮ ಅಭಿಯಾನ ಮುಂದುವರಿಸಿದ ಪ್ರಣಯ್ ಎಲ್ಲ ಪ್ರತಿಕೂಲಗಳ ನಡುವೆಯೂ 13-21, 21-9, 21-12 ಅಂತರದಿಂದ ಗೆಲುವು ಸಾಧಿಸಿದರು.

ಭಾರತ ಫೈನಲ್‍ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ ಸೆಣೆಸಲಿದೆ. ಇಂಡೋನೇಷ್ಯಾ ಸೆಮಿಫೈನಲ್‍ನಲ್ಲಿ ಜಪಾನ್ ವಿರುದ್ಧ 3-2 ಅಂತರದ ಗೆಲುವು ಸಾಧಿಸಿ ಫೈನಲ್ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News