ಕೋವಿಡ್ ಲಸಿಕೆ ಪಡೆಯಲು ಅಮೆರಿಕದ ಹೋಮ್ಸ್ ಪ್ರಾಂತದ ಜನತೆ ಹಿಂದೇಟು: ವರದಿ

Update: 2022-05-18 18:19 GMT

ವಾಷಿಂಗ್ಟನ್, ಮೇ 18: ಅಮೆರಿಕದ ಜನಸಮುದಾಯದ 77%ದಷ್ಟು ಮಂದಿ ಕೋವಿಡ್ ಲಸಿಕೆ ಪಡೆದಿದ್ದರೆ, ಓಹಿಯೊ ರಾಜ್ಯದ ಹೋಮ್ಸ್ ಪ್ರಾಂತದ ಬಹುತೇಕ ಜನತೆ ಇನ್ನೂ ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ಲ ಎಂದು ವರದಿಯಾಗಿದೆ.

ಬರ್ಲಿನ್, ಸ್ಟ್ರಾಸ್‌ಬರ್ಗ್ ಮತ್ತು ಡ್ರೆಸ್ಡನ್  ನಗರಗಳನ್ನು ಒಳಗೊಂಡಿರುವ ಹೋಮ್ಸ್ ಪ್ರಾಂತದ ಕೇವಲ 19% ಮಂದಿ ಕೋವಿಡ್ ಲಸಿಕೆ ಪಡೆದಿದ್ದು ಇದು ಅಮೆರಿಕದಲ್ಲಿ ಅತ್ಯಂತ ಕನಿಷ್ಟ ಪ್ರಮಾಣವಾಗಿದೆ. ಹೋಮ್ಸ್ ಪ್ರಾಂತದ ಸುಮಾರು 50,000 ನಿವಾಸಿಗಳಲ್ಲಿ ಸುಮಾರು 50%ದಷ್ಟು ಮಂದಿ ಸಾಂಪ್ರದಾಯಿಕ ಕ್ರಿಶ್ಚಿಯನ್ನರಾದ ಆ್ಯಮಿಷ್ ಸಮುದಾಯಕ್ಕೆ ಸೇರಿದವರು. ಆಧುನಿಕ ತಂತ್ರಜ್ಞಾನವನ್ನು ಬಯಸದ ಇವರು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕೃಷಿ ಕಾಯಕ ನಿರ್ವಹಿಸುತ್ತಾರೆ. ಈ ಸಮುದಾಯದ ಕೆಲವೇ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮದ ವರದಿಯನ್ನು ಉಲ್ಲೇಖಿಸಿ ತಜ್ಞರು ಹೇಳಿದ್ದಾರೆ.
 
ಅಮೆರಿಕದ 77% ಜನತೆ ಕೋವಿಡ್ ಲಸಿಕೆಯ ಕನಿಷ್ಟ 1 ಲಸಿಕೆ ಪಡೆದಿದ್ದರೆ, 67%ದಷ್ಟು ಜನತೆ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ದೇಶದಲ್ಲಿ ಕೊರೋನದಿಂದ ಸಾವನ್ನಪ್ಪಿದವರ ಪ್ರಮಾಣ ಮಂಗಳವಾರ 1 ಮಿಲಿಯದ ಗಡಿ ದಾಟಿದ್ದು , ಲಸಿಕೆ ಪಡೆದರೆ ಅಡ್ಡಪರಿಣಾಮ ಉಂಟಾಗಬಹುದು ಎಂಬ ಹಿಂಜರಿಕೆ ಲಸಿಕೆ ಪಡೆಯಲು ಅಡ್ಡಿಯಾಗಿದೆ . ಇನ್ನೂ 100 ಮಿಲಿಯಕ್ಕೂ ಅಧಿಕ ಮಂದಿ ಕೋವಿಡ್ ಲಸಿಕೆಯ ಒಂದು ಡೋಸ್ ಅನ್ನೂ ಪಡೆದಿಲ್ಲ ಎಂದು ಜಾನ್ಸ್ ಹಾಪ್ಕಿನ್ಸ್ ವಿವಿ ವರದಿ ಹೇಳಿದೆ.

ಮಾಧ್ಯಮಗಳಲ್ಲಿ ಲಸಿಕೆಯ ಅಡ್ಡಪರಿಣಾಮದ ಕುರಿತ ನಕಾರಾತ್ಮಕ ವರದಿ ಓದಿದ ಜನತೆ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ಹೋಮ್ಸ್ ಪ್ರಾಂತದ ನಿವಾಸಿಯನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ. ಅಮೆರಿಕದಲ್ಲಿ ಕೋವಿಡ್ ಸೋಂಕು ಅತೀ ಕನಿಷ್ಟ ಮಟ್ಟದಲ್ಲಿರುವ ಪ್ರದೇಶಗಳಲ್ಲಿ ಹೋಮ್ಸ್ ಪ್ರಾಂತವೂ ಸೇರಿದೆ, ಆದರೆ 2021ರಲ್ಲಿ ಈ ಪ್ರಾಂತದಲ್ಲಿ ಸಂಭವಿಸಿದ ಸಾವಿನ ಪ್ರಮಾಣದ 25%ದಷ್ಟು ಕೋವಿಡ್ ಸೋಂಕಿನಿಂದ ಸಂಭವಿಸಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News