ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಭಾರತದ ನಿಖಾತ್ ಝರೀನ್‌ಗೆ ಚಿನ್ನ

Update: 2022-05-19 16:40 GMT

ಇಸ್ತಾಂಬುಲ್‌: ಗುರುವಾರ ಟರ್ಕಿಯ ಇಸ್ತಾಂಬುಲ್‌ ನಲ್ಲಿ ನಡೆದ  ವಿಶ್ವ ಮಹಿಳಾ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದ ಫೈನಲ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಖಾತ್ ಝರೀನ್, ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುಟಾಮಾಸ್ ವಿರುದ್ಧ ಜಯಗಳಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಕೆಸಿ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಝರೀನ್ ಪಾತ್ರರಾಗಿದ್ದಾರೆ. 

ಮಾಜಿ ಯುವ ವಿಶ್ವ ಚಾಂಪಿಯನ್ ಆಗಿರುವ ಬಾಕ್ಸಿಂಗ್ ಪಟು ನಿಖಾತ್ ಝರೀನ್,  ಫೈನಲ್‌ನಲ್ಲಿ ಥಾಯ್ಲೆಂಡ್‌ ಎದುರಾಳಿ ವಿರುದ್ಧ ಅಮೋಘ ಹೋರಾಟ ನಡೆಸಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ನಿಖಾತ್ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್ ಬಾಕ್ಸರ್‌ ಗಿಂತ ಹೆಚ್ಚು ಪಂಚ್‌ಗಳನ್ನು ಹೊಡೆದಿದ್ದರಿಂದ ಎಲ್ಲಾ ತೀರ್ಪುಗಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು. ಎರಡನೇ ಸುತ್ತಿನ ಹಣಾಹಣಿಯಲ್ಲಿ ಜಿಟ್‌ಪಾಂಗ್ 3-2 ರಿಂದ ಮುನ್ನಡೆ ಸಾಧಿಸಿದ್ದರು. ಅಂತಿಮ ಸುತ್ತಿನಲ್ಲಿ, ನಿಖಾತ್ ತನ್ನ ಎದುರಾಳಿಯನ್ನು ಸಮರ್ಥವಾಗಿ ನಿಭಾಯಿಸಿದ್ದು, 5-0 ಅಂತರದೊಂದಿಗೆ ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ. 

ಈ ವರ್ಷ ನಡೆದ ಸ್ಪರ್ಧೆಯಲ್ಲಿ ಭಾರತದ ಇತರ ಇಬ್ಬರು ಬಾಕ್ಸರ್‌ಗಳಾದ ಮನೀಶಾ (57 ಕೆಜಿ) ಮತ್ತು ಪರ್ವೀನ್ (63 ಕೆಜಿ) ಕಂಚಿನ ಪದಕ ಗೆದ್ದಿದ್ದಾರೆ. 2019 ರಲ್ಲಿ ರಷ್ಯಾದಲ್ಲಿ ನಡೆದ ಪಂದ್ಯಾವಳಿಯಲ್ಲಿ, ಭಾರತೀಯ ಬಾಕ್ಸರ್‌ಗಳು ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಪಡೆದಿದ್ದರು. ಭಾರತ ಇದುವರೆಗಿನ 11 ಆವೃತ್ತಿಗಳಲ್ಲಿ ಒಂಬತ್ತು ಚಿನ್ನ, ಎಂಟು ಬೆಳ್ಳಿ ಮತ್ತು 19 ಕಂಚು ಸೇರಿದಂತೆ 36 ಪದಕಗಳನ್ನು ಗೆದ್ದಿದೆ.  ಅತೀ ಹೆಚ್ಚು ಪದಕ ಗೆದ್ದ ರಷ್ಯಾ (60) ಮತ್ತು ಚೀನಾ (50) ದ ನಂತರದ ಸ್ಥಾನದಲ್ಲಿ ಭಾರತವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News