"ಇನ್ಶಾ ಅಲ್ಲಾಹ್, ಒಂದು ದಿನ ಆಕೆ ಒಲಿಂಪಿಕ್ ತಲುಪಲಿದ್ದಾಳೆ": ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ ನಿಖಾತ್‌ ಝರೀನ್‌ ತಾಯಿ

Update: 2022-05-20 14:31 GMT
Photo: Twitter.com/ANI

ಹೈದರಾಬಾದ್: ಗುರುವಾರ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ  ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದ ಫೈನಲ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಖಾತ್ ಝರೀನ್ ಚಿನ್ನದ ಪದಕ‌ ಗೆದ್ದು ವಿಶ್ವಚಾಂಪಿಯನ್‌ ಆಗಿದ್ದರೆ. ಈ ಸಾಧನೆ ಮಾಡಿದ ಐದನೇ ಭಾರತೀಯ ಮಹಿಳೆ ಖ್ಯಾತಿಗೆ ಪಾತ್ರರಾಗಿದ್ದಾರೆ.

ನಿಖಾತ್‌ ಝರೀನ್‌ ರ ಈ ಸಾಧನೆಯನ್ನು ದೇಶವೇ ಕೊಂಡಾಡುತ್ತಿದೆ. ದೇಶದ ಗಣ್ಯರು, ಕ್ರೀಡಾಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ನಿಖಾತ್‌ ಝರೀನ್‌ ತಾಯಿ, ಮಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಒಂದು ದಿನ ನಿಖಾತ್‌ ಒಲಿಂಪಿಕ್‌ ತಲುಪುವ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮಗಳು ದೇಶದ ಪತಾಕೆಯನ್ನು ಎತ್ತಿ ಹಿಡಿಯುತ್ತಿದ್ದಂತೆಯೇ, ANI ಜೊತೆ ಪ್ರತಿಕ್ರಿಯಿಸಿದ ತಾಯಿ ಪರ್ವೀನ್ ಸುಲ್ತಾನಾ, “ನಾನು ಅವಳ (ನಿಖಾತ್ ಝರೀನ್) ಬಗ್ಗೆ ತುಂಬಾ ಸಂತೋಷ ಮತ್ತು ಹೆಮ್ಮೆಪಡುತ್ತೇನೆ. ಇನ್ಶಾ ಅಲ್ಲಾ, ಆಕೆ ಹಂತ ಹಂತವಾಗಿ ಒಲಿಂಪಿಕ್ ಕ್ರೀಡಾಕೂಟವನ್ನು ತಲುಪಲಿದ್ದಾಳೆ” ಎಂದು ಭರವಸೆಯಿಂದ ಹೇಳಿದ್ದಾರೆ. "ಇದೊಂದು ಸಂತಸದ ಕ್ಷಣ. ಸಂಪೂರ್ಣ ದೇಶವೇ ಈ ಚಿನ್ನಕ್ಕಾಗಿ ಕಾಯುತ್ತಿತ್ತು. ದೇಶ, ಬಾಕ್ಸಿಂಗ್‌ ಅಭಿಮಾನಿಗಳು ಮತ್ತು ನಾನು ಆಕೆಯ ಬಗ್ಗೆ ಹೆಮ್ಮೆಪಡುತ್ತೇವೆ. ಮುಖ್ಯಮಂತ್ರಿ 50 ಲಕ್ಷ ರೂ.ಗಳನ್ನು ಘೋಷಣೆ ಮಾಡಿದ್ದಾರೆ. ಇದು ನಮ್ಮ ಜೀವನಕ್ಕೊಂದು ತಿರುವು" ಎಂದು ನಿಖಾತ್‌ ಝರೀನ್‌ ತಂದೆ ಜಮೀಲ್‌ ಅಹ್ಮದ್‌ ಹೇಳಿದ್ದಾರೆ.

ಗುರುವಾರ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ  ವಿಶ್ವ ಮಹಿಳಾ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದ ಫೈನಲ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಖಾತ್ ಝರೀನ್, ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುಟಾಮಾಸ್ ವಿರುದ್ಧ ಜಯಗಳಿಸುವ ಮೂಲಕ ಚಿನ್ನದ ಪದಕವನ್ನು ಭಾರತದ ಖಾತೆಗೆ ಜಮಾ ಮಾಡಿದ್ದಾರೆ. ಈ ಮೂಲಕ ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಕೆಸಿ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಝರೀನ್ ಪಾತ್ರರಾಗಿದ್ದಾರೆ. ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿ, ಬಾಕ್ಸಿಂಗ್‌ ಮಾಜಿ ವಿಶ್ವ ಚಾಂಪಿಯನ್‌ ಮೇರಿ ಕೋಮ್‌, ವಿವಿಎಸ್‌ ಲಕ್ಷ್ಮಣ್‌ ಸಹಿತ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ವರ್ಷ ನಡೆದ ಸ್ಪರ್ಧೆಯಲ್ಲಿ ಭಾರತದ ಇತರ ಇಬ್ಬರು ಬಾಕ್ಸರ್‌ಗಳಾದ ಮನೀಶಾ (57 ಕೆಜಿ) ಮತ್ತು ಪರ್ವೀನ್ (63 ಕೆಜಿ) ಕಂಚಿನ ಪದಕ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News