ಅಧಿಕ ಪ್ರಮಾಣದ ವಾಯು ಮಾಲಿನ್ಯ ಹೃದಯಕ್ಕೆ ಮಾರಕ: ಅಧ್ಯಯನ

Update: 2022-05-23 17:03 GMT

ಲಂಡನ್, ಮೇ 23: ಅಧಿಕ ಪ್ರಮಾಣದ ಮಾಲಿನ್ಯಕ್ಕೆ ಒಳಗಾದ ಗಾಳಿಯನ್ನು ಸೇವಿಸಿದರೆ ಮಾರಕ ಹೃದಯದ ಕಾಯಿಲೆಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಇಂಪ್ಲಾಂಟೇಬಲ್ ಕಾರ್ಡಿಯೊವ್ಯಾಸ್ಕುಲರ್ ಡೆಫಿಬ್ರಿಲೇಟರ್  (ಐಸಿಡಿ) ಸಾಧನವನ್ನು ಅಳವಡಿಸಿಕೊಂಡಿರುವ ರೋಗಿಗಳ ಮೇಲೆ ನಡೆಸಿದ ಸಂಶೋಧನೆಯ ಫಲಿತಾಂಶವನ್ನು ಕಳೆದ ವಾರ ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ (ಇಎಸ್‌ಸಿ)ಯ ವಿಜ್ಞಾನ ಸಮಾವೇಶದಲ್ಲಿ ಮಂಡಿಸಲಾಯಿತು.

‘‘‘‘ವೆಂಟ್ರಿಕ್ಯುಲರ್ ಅರೈತ್‌ಮಿಯಾಸ್‌ನ  ಅಪಾಯ ಹೊಂದಿರುವ ಜನರು ದೈನಂದಿನ ಮಾಲಿನ್ಯ ಮಟ್ಟವನ್ನು ಪರಿಶೀಲಿಸಬೇಕು ಎನ್ನುವುದನ್ನು ನಮ್ಮ ಸಂಶೋಧನೆಯು ಸೂಚಿಸಿದೆ’’ ಎಂದು ಅಧ್ಯಯನದ ವರದಿಯನ್ನು ಬರೆದಿರುವ ಬೊಲೋಗ್ನದ ಮ್ಯಾಗಿಯೋರ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಅಲೇಸಿಯಾ ಝಾನಿ ಹೇಳಿದ್ದಾರೆ.

‘‘ಪಾರ್ಟಿಕ್ಯುಲೇಟ್ ಮ್ಯಾಟರ್ (ಪಿಎಮ್) 2.5 ಮತ್ತು ಪಿಎಮ್ 10 ಸಾಂದ್ರತೆ ಅಧಿಕವಾಗಿದ್ದಾಗ ಎಷ್ಟು ಸಾಧ್ಯವೋ ಅಷ್ಟು ಸಮಯ ಮನೆಯ ಒಳಗೇ ಇರುವುದು ಒಳಿತು ಹಾಗೂ ಹೊರಗೆ ಹೋಗುವಾಗ, ಅದರಲ್ಲೂ ಮುಖ್ಯವಾಗಿ ಹೆಚ್ಚಿನ ವಾಹನ ಸಂಚಾರ ಇರುವ ಸ್ಥಳದ ಸಮೀಪಕ್ಕೆ ಹೋಗುವಾಗ ಎನ್95 ಮಾಸ್ಕ್ ಧರಿಸಬೇಕು. ಮನೆಯಲ್ಲಿ ವಾಯು ಶುದ್ಧೀಕರಣ ಯಂತ್ರವೊಂದನ್ನು ಬಳಸಬಹುದು’’ ಎಂಬುದಾಗಿ ಝಾನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News