ಮುಂದಿನ ವರ್ಷದ ಐಪಿಎಲ್‌ ಗೆ ಆರ್‌ಸಿಬಿ ತಂಡಕ್ಕೆ ಮರಳುತ್ತೇನೆ: ಎಬಿಡಿ ವಿಲಿಯರ್ಸ್

Update: 2022-05-24 08:22 GMT
Photo:BCCI/IPL

ಹೊಸದಿಲ್ಲಿ:ಮುಂದಿನ ವರ್ಷದ ಐಪಿಎಲ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು  ತಂಡಕ್ಕೆ ಮರಳಲಿದ್ದೇನೆ ಎಂದು  ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಖಚಿತಪಡಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಡಿವಿಲಿಯರ್ಸ್, ಐಪಿಎಲ್ 2022 ರಲ್ಲಿ ಭಾಗವಹಿಸಿರಲಿಲ್ಲ.  ಈ ವರ್ಷದ ಐಪಿಎಲ್ ನಲ್ಲಿ  ಆರ್‌ಸಿಬಿ ಬುಧವಾರ  ಎಲಿಮಿನೇಟರ್ ಪಂದ್ಯವನ್ನು ಆಡಲಿದೆ. 

"ಮುಂದಿನ ವರ್ಷ ನಾನು ಖಂಡಿತವಾಗಿಯೂ ಐಪಿಎಲ್‌ನಲ್ಲಿ ಇರುತ್ತೇನೆ. ನನ್ನ ಎರಡನೇ ತವರು ಮನೆಗೆ ಮರಳಲು ನಾನು ಇಷ್ಟಪಡುತ್ತೇನೆ. ಯಾವ  ಪಾತ್ರದ ಮೂಲಕ ಮರಳಬೇಕೆಂಬುದನ್ನು ಇನ್ನೂ ಖಚಿತವಾಗಿಲ್ಲ" ಎಂದು ಡಿವಿಲಿಯರ್ಸ್ VUSport ಗೆ ತಿಳಿಸಿದರು.

228 ಏಕದಿನ ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ 9,577 ರನ್ ಗಳಿಸುವ ಮೂಲಕ ಶ್ರೇಷ್ಠ ಸೀಮಿತ ಓವರ್ ಗಳ  ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ  ಡಿವಿಲಿಯರ್ಸ್ ಎಪ್ರಿಲ್ 2008 ರಲ್ಲಿ ಭಾರತದ ವಿರುದ್ಧ 217 ರನ್ ಸಿಡಿಸಿದಾಗ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ದಕ್ಷಿಣ ಆಫ್ರಿಕಾದ ಬ್ಯಾಟರ್ ಎನಿಸಿಕೊಂಡಿದ್ದರು.

2008 ರ ಮೊದಲ ಆವೃತ್ತಿಯ ಐಪಿಎಲ್ ನಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿರುವ ವಿಲಿಯರ್ಸ್  170 ಇನಿಂಗ್ಸ್‌ಗಳಿಂದ 38.70 ಸರಾಸರಿಯಲ್ಲಿ 5,162 ರನ್‌ ಗಳಿಸಿದ್ದಾರೆ. ಈ ಮೂಲಕ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News