ಉಕ್ರೇನ್ ಮೇಲಿನ ಆಕ್ರಮಣ ವಿರೋಧಿಸಿ ರಾಜೀನಾಮೆ ಸಲ್ಲಿಸಿದ ರಶ್ಯದ ರಾಯಭಾರಿ

Update: 2022-05-24 18:06 GMT

ಮಾಸ್ಕೊ, ಮೇ 24: ಉಕ್ರೇನ್ ಮೇಲೆ ಯುದ್ಧ ಸಾರಿದ ರಶ್ಯ ಅಧ್ಯಕ್ಷ ಪುಟಿನ್ ಅವರ ನಿರ್ಧಾರವನ್ನು ಖಂಡಿಸಿ ವಿಶ್ವಸಂಸ್ಥೆಯಲ್ಲಿ ರಶ್ಯದ ರಾಯಭಾರಿ ಬೋರಿಸ್ ಬೊಂಡರೇವ್ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. 

ಫೆಬ್ರವರಿ 24ರವರೆಗೆ ನನ್ನ ದೇಶದ ಬಗ್ಗೆ ನಾನೆಂದೂ ನಾಚಿಕೆ ಪಟ್ಟುಕೊಂಡಿರಲಿಲ್ಲ. ನನ್ನ ಸರಕಾರ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಅಧ್ಯಕ್ಷರು ಎಸಗಿರುವ ಆಕ್ರಮಣವನ್ನು ನಾನು ವಿರೋಧಿಸುತ್ತೇನೆ ಎಂದವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯುದ್ಧವನ್ನು ರೂಪಿಸಿದವರು ಒಂದೇ ಉದ್ದೇಶವನ್ನು ಬಯಸುತ್ತಾರೆ ‘ಶಾಶ್ವತವಾಗಿ ಅಧಿಕಾರದಲ್ಲಿ ಉಳಿದುಕೊಳ್ಳುವುದು, ಆಡಂಬರದ ಅರಮನೆಯಲ್ಲಿ ವಾಸಿಸುವುದು, ರಶ್ಯದ ನೌಕಾಪಡೆಯ ಸಂಪೂರ್ಣ ವೆಚ್ಚದಷ್ಟು ದುಬಾರಿಯಾದ ಐಷಾರಾಮಿ ಹಡಗಿನಲ್ಲಿ ವಿಹರಿಸುವುದು, ಅನಿಯಮಿತ ಅಧಿಕಾರ ಮತ್ತು ದುಷ್ಪರಿಣಾಮದ ಭಯವಿಲ್ಲದೆ ಬದುಕುವುದು’ ಅವರ ಉದ್ದೇಶವಾಗಿದೆ . ವಿದೇಶಾಂಗ ಸಚಿವಾಲಯವು ಯುದ್ಧೋತ್ಸಾಹಿ, ಸುಳ್ಳು ಮತ್ತು ದ್ವೇಷದ ಸಂಸ್ಥೆಯಾಗಿದೆ ಎಂದವರು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News