ಭಾರತ-ಅಮೆರಿಕ ನಡುವಿನ ಪಾಲುದಾರಿಕೆಯನ್ನು ನಿಕಟವಾಗಿಸಲು ಬದ್ಧ: ಬೈಡನ್

Update: 2022-05-24 18:27 GMT

ಟೋಕಿಯೊ, ಮೇ 24: ನಮ್ಮ ಎರಡು ದೇಶಗಳು ಒಟ್ಟಾಗಿ ಮಾಡಬೇಕಾದ ಮತ್ತು ಮಾಡಬಹುದಾದ ಬಹಳಷ್ಟು ಕಾರ್ಯವಿದೆ. ಭಾರತ-ಅಮೆರಿಕ ಪಾಲುದಾರಿಕೆಯನ್ನು ಭೂಮಿಯ ಮೇಲಿನ ಅತ್ಯಂತ ನಿಕಟ ಬಾಂಧವ್ಯವನ್ನಾಗಿಸಲು ತಾನು ಬದ್ಧನಾಗಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಜಪಾನ್ ನ ಟೋಕಿಯೋದಲ್ಲಿ ನಡೆದ ಕ್ವಾಡ್ ಒಕ್ಕೂಟದ ಸಭೆಯ ನೇಪಥ್ಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ನಡೆಸಿದ ದ್ವಿಪಕ್ಷೀಯ ಸಭೆಯ ಬಳಿಕ ಅವರು ಮಾತನಾಡಿದರು. ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ರಕ್ಷಣೆ ಕ್ಷೇತ್ರದಲ್ಲಿನ ಸಹಕಾರವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಹಾಗೂ ಉಭಯ ದೇಶಗಳ ಜನರ ನಡುವಿನ ಸಂಪರ್ಕ, ಸಂಬಂಧವನ್ನು ವಿಸ್ತರಿಸುವ ಬಗ್ಗೆ ಉಭಯ ಮುಖಂಡರು ಚರ್ಚಿಸಿದರು. ಮಾತುಕತೆ ದ್ವಿಪಕ್ಷೀಯ ಪಾಲುದಾರಿಕೆಗೆ ಆಳ ಮತ್ತು ಆವೇಗವನ್ನು ಸೇರಿಸುವ ಗಣನೀಯ ಫಲಿತಾಂಶದೊಂದಿಗೆ ಮುಕ್ತಾಯವಾಗಿದೆ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಸಭೆಯ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘ಭಾರತ-ಅಮೆರಿಕ ನಡುವಿನ ಸಂಬಂಧ ನಿಜವಾದ ಅರ್ಥದಲ್ಲಿ ವಿಶ್ವಾಸ, ನಂಬಿಕೆಯ ಪಾಲುದಾರಿಕೆಯಾಗಿದೆ. ಉಭಯ ದೇಶಗಳೂ ಇಂಡೊ-ಪೆಸಿಫಿಕ್ ವಲಯಕ್ಕೆ ಸಂಬಂಧಿಸಿ ಸಾಮಾನ್ಯ ದೃಷ್ಟಿಕೋನವನ್ನು ಹೊಂದಿದೆ ಎಂದರು. 

ಅಮೆರಿಕ ಹೂಡಿಕೆ ಪ್ರೋತ್ಸಾಹ ಒಪ್ಪಂದದ ಪ್ರಕಾರ, ನಮ್ಮ 2 ದೇಶಗಳ ನಡುವಿನ ಹೂಡಿಕೆಯಲ್ಲಿ ಗಣನೀಯ ಪ್ರಗತಿ, ತಂತ್ರಜ್ಞಾನ ಹಾಗೂ ಇತರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಹೆಚ್ಚುವ ನಿರೀಕ್ಷೆಯಿದೆ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News