×
Ad

ಚೆಸ್ಸಬಲ್ ಮಾಸ್ಟರ್ಸ್: ಫೈನಲ್ ತಲುಪಿದ ಚೆಸ್ ತಾರೆ ಪ್ರಜ್ಞಾನಂದ

Update: 2022-05-25 13:11 IST

ಚೆನ್ನೈ: 1.6 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಚಾಂಪಿಯನ್ಸ್ ಚೆಸ್ ಟೂರ್‌ನ ನಾಲ್ಕನೇ ಚರಣದ  ಚೆಸ್ಸಬಲ್ ಮಾಸ್ಟರ್ಸ್‌ನ ಸೆಮಿ ಫೈನಲ್‌ ನಲ್ಲಿ ಅಜೇಯ ಗೆಲುವಿನ ದಾಖಲೆ ಹೊಂದಿದ್ದ, ಭರ್ಜರಿ ಫಾರ್ಮ್ ನಲ್ಲಿದ್ದ  ಡಚ್ ಗ್ರ್ಯಾಂಡ್‌ಮಾಸ್ಟರ್ ಅನೀಶ್ ಗಿರಿಯವರನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದ ಭಾರತದ ಕಿರಿಯ ವಯಸ್ಸಿನ ಚೆಸ್ ಸ್ಟಾರ್  ರಮೇಶ್‌ಬಾಬು ಪ್ರಜ್ಞಾನಂದ ಮತ್ತೊಂದು ಅಮೋಘ ಪ್ರದರ್ಶನ ನೀಡಿದರು.

ಪ್ರಜ್ಞಾನಂದ ಅವರ  ಪಂದ್ಯವು ಬುಧವಾರ ಭಾರತೀಯ ಕಾಲಮಾನ ಬೆಳಗಿನ ಜಾವ 2 ಗಂಟೆಗೆ ಮುಕ್ತಾಯವಾಯಿತು. ಅವರು  ಬುಧವಾರ ಬೆಳಗ್ಗೆ ತನ್ನ 11ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದಾರೆ.

ಚೆನ್ನೈನ 16 ವರ್ಷ ವಯಸ್ಸಿನ ಪ್ರಜ್ಞಾನಂದ ಡಚ್ ನಂ.1 ಚೆಸ್ ತಾರೆ ಗಿರಿಯವರನ್ನು ಸುಲಭವಾಗಿ ಸೋಲಿಸಿದರು.  ಫೈನಲ್ ನಲ್ಲಿ  ಚೀನಾದ ವಿಶ್ವ ನಂ. 2 ಆಟಗಾರ ಡಿಂಗ್ ಲಿರೆನ್ ಅವರೊಂದಿಗೆ ಸೆಣಸಾಡಲಿದ್ದಾರೆ. ಲಿರೆನ್  ಅವರು ಮತ್ತೊಂದು ಸೆಮಿಫೈನಲ್‌ನಲ್ಲಿ ವಿಶ್ವದ ನಂ. 1 ಚೆಸ್ ತಾರೆ  ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನುಸೋಲಿಸಿ  ಚಕಿತಗೊಳಿಸಿದರು.

'ನಾನು ಬೆಳಗ್ಗೆ 8:45 ರ ಸುಮಾರಿಗೆ ಶಾಲೆಯಲ್ಲಿರಬೇಕು.ಈಗ ಸಮಯ ರಾತ್ರಿ 2 ಗಂಟೆಯಾಗಿದೆ.  ಆದ್ದರಿಂದ ನಾನು ಹೋಗಿ ಮಲಗಬೇಕು. ಪರೀಕ್ಷೆಯಲ್ಲಿ ನಿದ್ದೆ ಮಾಡದೇ ಇರಲು ಪ್ರಯತ್ನಿಸಬೇಕು. ನನಗೆ  ವಾಣಿಜ್ಯ ಪರೀಕ್ಷೆ ಬರೆಯಬೇಕಾಗಿದೆ. ನಾನು ಉತ್ತೀರ್ಣನಾಗುತ್ತೇನೆ ಎಂಬ ವಿಶ್ವಾಸವಿದೆ’’ ಎಂದು 16 ವರ್ಷದ ಪ್ರಜ್ಞಾನಂದ ಫೈನಲ್ ಪ್ರವೇಶಿಸಿದ ನಂತರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News