"ಉಕ್ರೇನ್‌ ಮೇಲಿನ ಆಕ್ರಮಣವು ಮೂರನೇ ವಿಶ್ವಯುದ್ಧದ ಆರಂಭ ಆಗಿರಬಹುದು": ಕೋಟ್ಯಧಿಪತಿ ಹೂಡಿಕೆದಾರ ಜಾರ್ಜ್ ಸೊರೋಸ್

Update: 2022-05-25 17:22 GMT

 ದಾವೊಸ್, ಮೇ 25: ಉಕ್ರೇನ್ ಮೇಲಿನ ರಶ್ಯದ ಆಕ್ರಮಣ 3ನೇ ವಿಶ್ವಯುದ್ಧದ ಆರಂಭ ಆಗಿರಬಹುದು ಮತ್ತು ಈ ಯುದ್ಧ ನಡೆದರೆ ನಾಗರಿಕರು ಬದುಕುಳಿಯುವುದಿಲ್ಲ ಎಂದು ಕೋಟ್ಯಾಧಿಪತಿ ಹೂಡಿಕೆದಾರ ಜಾರ್ಜ್ ಸೊರೋಸ್ ಎಚ್ಚರಿಸಿದ್ದಾರೆ.

 ದಾವೋಸ್‌ನಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಶ್ಯ ಅಧ್ಯಕ್ಷ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರು ಯಾವುದೇ ಮಿತಿಯಿಲ್ಲದ ಮೈತ್ರಿಯಲ್ಲಿ ಜೋಡಿಸಲ್ಪಟ್ಟಿದ್ದಾರೆ. ಉಕ್ರೇನ್ ಯುದ್ಧವನ್ನು ಸಮಾಪ್ತಿಗೊಳಿಸಲು ಜಾಗತಿಕ ಸಮುದಾಯ ತನ್ನೆಲ್ಲಾ ಸಂಪನ್ಮೂಲಗಳನ್ನು ಬಳಸಬೇಕು ಮತ್ತು ಪುಟಿನ್‌ರನ್ನು ಸೋಲಿಸಿದರೆ ಮಾತ್ರ ಪ್ರಜೆಗಳನ್ನು ಉಳಿಸಬಹುದು . ರಶ್ಯದ ಆಕ್ರಮಣ 3ನೇ ವಿಶ್ವಯುದ್ಧದ ಆರಂಭ ಮತ್ತು ನಮ್ಮ ನಾಗರಿಕರು ಇದರಲ್ಲಿ ಬದುಕುಳಿಯಲಾರರು ಎಂದವರು ಹೇಳಿದರು.

ಉಕ್ರೇನ್‌ನಲ್ಲಿ ಪುಟಿನ್ ಯೋಜಿಸಿದ್ದ ‘ವಿಶೇಷ ಸೈನಿಕ ಕಾರ್ಯಾಚರಣೆ’ ಅವರು ನಿರೀಕ್ಷಿಸಿದ ರೀತಿಯಲ್ಲಿ ಸಾಗಲಿಲ್ಲ. ಉಕ್ರೇನ್‌ನಲ್ಲಿರುವ ರಶ್ಯ ಭಾಷೆ ಮಾತನಾಡುವ ಜನತೆ ತಮ್ಮನ್ನು ವಿಮೋಚಕರು ಎಂದು ಶ್ಲಾಘಿಸಿ ಸ್ವಾಗತಿಸಬಹುದು. ತಮಗೆ ನೆರವಾಗಬಹುದು ಎಂದು ಭಾವಿಸಿದ್ದರು. ಆದರೆ ಆ ರೀತಿ ಆಗಲಿಲ್ಲ.

ಪುಟಿನ್ ಮತ್ತು ಜಿಂಪಿಂಗ್ ಇಬ್ಬರೂ ಹಲವು ವಿಷಯದಲ್ಲಿ ಸಮಾನರಾಗಿದ್ದಾರೆ. ಇಬ್ಬರೂ ಬೆದರಿಸುವಿಕೆಯಿಂದ ಆಡಳಿತ ನಡೆಸುತ್ತಾರೆ ಮತ್ತು ಇದರಿಂದ ಆಘಾತಕಾರಿ ತಪ್ಪುಗಳನ್ನು ಎಸಗುತ್ತಾರೆ. ಉಕ್ರೇನ್ನಲ್ಲಿ ತಮಗೆ ವಿಮೋಚಕರೆಂದು ಶ್ಲಾಘನೆ ಮತ್ತು ಸ್ವಾಗತ ಲಭಿಸಬಹುದು ಎಂದು ಪುಟಿನ್ ಭಾವಿಸಿದ್ದರೆ, ಜಿಂಪಿಂಗ್ ಸಮರ್ಥನೀಯವಲ್ಲದ ಶೂನ್ಯ ಕೋವಿಡ್ ನೀತಿಗೆ ಅಂಟಿಕೊಂಡಿದ್ದಾರೆ. ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿ ಪುಟಿನ್ ಭಯಾನಕ ತಪ್ಪೆಸಗಿದ್ದಾರೆ. ಈಗ ಅವರು ಕದನವಿರಾಮಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಕದನ ವಿರಾಮವನ್ನು ಸಾಧಿಸಲಾಗದು, ಯಾಕೆಂದರೆ ಪುಟಿನ್ ವಿಶ್ವಾಸಯೋಗ್ಯರಲ್ಲ ಎಂದು ಸೊರೋನ್ ಹೇಳಿದ್ದಾರೆ.

 ಸಾಮಾನ್ಯ ನಿರೀಕ್ಷೆಗಳಿಗೆ ವಿರುದ್ಧವಾಗಿ, ಜಿಂಪಿಂಗ್ ಮಾಡಿರುವ ತಪ್ಪುಗಳಿಂದಾಗಿ ಅವರು ಅಪೇಕ್ಷಿತ 3ನೇ ಅವಧಿಯನ್ನು ಪಡೆಯದೆ ಇರಬಹುದು. ಒಂದು ವೇಳೆ 3ನೇ ಅವಧಿಗೆ ಆಯ್ಕೆಯಾದರೂ, ಪಾಲಿಟ್‌ಬ್ಯೂರೋ ಸದಸ್ಯರ ಆಯ್ಕೆಗೆ ಅವರಿಗೆ ಮುಕ್ತ ಅಧಿಕಾರ ಲಭಿಸುವುದಿಲ್ಲ. ಇದರಿಂದ ಅವರ ಅಧಿಕಾರ ಮತ್ತು ಪ್ರಭಾವ ಬಹಳಷ್ಟು ಕಡಿಮೆಯಾಗಬಹುದು ಎಂದವರು ಹೇಳಿದ್ದಾರೆ.
 
ರಶ್ಯ ಆಕ್ರಮಣದ ಬಗ್ಗೆ ಚೀನಾಕ್ಕೆ ಮೊದಲೇ ಮಾಹಿತಿ ಇತ್ತು

 ಬೀಜಿಂಗ್‌ನಲ್ಲಿ ಫೆಬ್ರವರಿ 4ರಂದು ನಡೆದ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ಗೆ ಉಕ್ರೇನ್‌ನಲ್ಲಿ ನಡೆಸಲಿರುವ ‘ವಿಶೇಷ ಸೇನಾ ಕಾರ್ಯಾಚರಣೆ’  ಬಗ್ಗೆ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕೆ ಸಹಮತ ಸೂಚಿಸಿದ್ದ ಕ್ಸಿ ಜಿಂಪಿಂಗ್, ಒಲಿಂಪಿಕ್ಸ್ ಮುಕ್ತಾಯದವರೆಗೆ ಕಾಯುವಂತೆ ಪುಟಿನ್‌ರನ್ನು ಕೋರಿದ್ದರು. ಆದ್ದರಿಂದಲೇ ಒಮೈಕ್ರಾನ್ ಸೋಂಕು ಉಲ್ಬಣಗೊಂಡಿದ್ದರೂ ಒಲಿಂಪಿಕ್ಸ್ ಕ್ರೀಡೆ ಮುಂದುವರಿಸಲು ಜಿಂಪಿಂಗ್ ಸೂಚಿಸಿದ್ದರು ಎಂದು ಸೊರೋಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News