ಇಂದು ಎರಡನೇ ಕ್ವಾಲಿಫೈಯರ್: ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ರಾಜಸ್ಥಾನ-ಆರ್‌ಸಿಬಿ ಹಣಾಹಣಿ

Update: 2022-05-27 05:24 GMT
Photo: Twitter

ಅಹಮದಾಬಾದ್: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸಾಧಾರಣ ಬೌಲಿಂಗ್ ಪ್ರದರ್ಶನ ನೀಡಿ ಕೈ ಸುಟ್ಟುಕೊಂಡಿರುವ ರಾಜಸ್ಥಾನ ರಾಯಲ್ಸ್ ಸರಿಯಾದ ಸಮಯಕ್ಕೆ ಫಾರ್ಮ್‌ಗೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಶುಕ್ರವಾರ ನಡೆಯಲಿರುವ ಐಪಿಎಲ್‌ನ ಎರಡನೇ ಕ್ವಾಲಿಫೈಯರ್‌ನಲ್ಲಿ ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ತಂಡ ಮೇ 29ರಂದು ನಡೆಯಲಿರುವ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಅದೃಷ್ಟದ ಬಲದಿಂದ ಪ್ಲೇ-ಆಫ್‌ಗೆ ತೇರ್ಗಡೆಯಾಗಿದ್ದ ಆರ್‌ಸಿಬಿ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು 14 ರನ್‌ಗಳ ಅಂತರದಿಂದ ಸೋಲಿಸಿದೆ. ಇದರೊಂದಿಗೆ ದೀರ್ಘ ಸಮಯದಿಂದ ಕಾಯುತ್ತಿರುವ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆ ಮೂಡಿಸಿದೆ.

ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ಎರಡನೇ ಸ್ಥಾನ ಪಡೆದಿದ್ದ ರಾಜಸ್ಥಾನ ತಂಡ ಗುಜರಾತ್ ವಿರುದ್ಧ 1ನೇ ಕ್ವಾಲಿಫೈಯರ್ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದಿಂದ ಸೋಲನುಭವಿಸಿತ್ತು. ಕೋಲ್ಕತಾದಲ್ಲಿ ಎರಡು ಗರಿಷ್ಠ ಸ್ಕೋರ್‌ಗಳ ಪಂದ್ಯಗಳ ಬಳಿಕ ಐಪಿಎಲ್ ಅಹಮದಾಬಾದ್‌ಗೆ ಸ್ಥಳಾಂತರವಾಗಿದೆ. ಬುಧವಾರ ನಡೆದ ಪಂದ್ಯದಲ್ಲಿ ರಜತ್ ಪಾಟಿದಾರ್ ಜೀವನಶ್ರೇಷ್ಠ ಇನಿಂಗ್ಸ್(ಔಟಾಗದೆ 112 ರನ್) ಆಡಿ ಆರ್‌ಸಿಬಿ 2ನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲು ನೆರವಾದರು. ಅವರು ಮತ್ತೊಂದು ಅತ್ಯಂತ ಒತ್ತಡದ ಪಂದ್ಯದಲ್ಲಿ ಗೆಲುವಿನ ಸ್ಕೋರ್ ದಾಖಲಿಸುವ ವಿಶ್ವಾಸದಲ್ಲಿದ್ದಾರೆ. ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಸೇರಿದಂತೆ ಎಲ್ಲ ಫ್ರಾಂಚೈಸಿಗಳಿಂದ ನಿರ್ಲಕ್ಷಿಸಲ್ಪಟ್ಟಿದ್ದ ರಜತ್ ಪಾಟಿದಾರ್ ಗಾಯಗೊಂಡಿರುವ ಲವನೀತ್ ಸಿಸೋಡಿಯಾ ಬದಲಿಗೆ ಆರ್‌ಸಿಬಿ ಪಾಳಯ ಸೇರಿದ್ದರು. ನಾಯಕ ಎಫ್‌ಡು ಪ್ಲೆಸಿಸ್ ಶೂನ್ಯಕ್ಕೆ ಔಟಾದಾಗ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಇಂದೋರ್ ಬ್ಯಾಟರ್ ರಜತ್ ಇತಿಹಾಸ ನಿರ್ಮಿಸುತ್ತಾರೆಂದು ಯಾರೂ ಊಹಿಸಿರಲಿಲ್ಲ. ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿದ ಭಾರತದ 4ನೇ ಹೊಸ ಆಟಗಾರನಾಗಿದ್ದಾರೆ. ಐಪಿಎಲ್ ಚರಿತ್ರೆಯಲ್ಲಿ ಪ್ಲೇ ಆಫ್ ಪಂದ್ಯದಲ್ಲಿ ಶತಕ ಸಿಡಿಸಿದ 5ನೇ ಬ್ಯಾಟರ್ ಹಾಗೂ ಮೊದಲ ಹೊಸ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ದಿಗ್ಗಜ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಎಫ್ ಡು ಪ್ಲೆಸಿಸ್ ಲಕ್ನೊ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ದಿನೇಶ್ ಕಾರ್ತಿಕ್ ಸ್ಥಿರ ಪ್ರದರ್ಶನ ನೀಡಲು ಸಫಲರಾಗಿದ್ದಾರೆ. ಟೀಮ್ ಮ್ಯಾನೇಜ್‌ಮೆಂಟ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ರಿಂದ ಇನ್ನಷ್ಟು ರನ್ ನಿರೀಕ್ಷಿಸುತ್ತಿದೆ. 

ತಂಡವು ಗೆಲುವಿನ ಕಾಂಬಿನೇಶನ್‌ಗೆ ಅಂಟಿಕೊಳ್ಳಬಹುದು. ಲಕ್ನೊ ಬ್ಯಾಟರ್‌ಗಳಿಂದ ದಂಡಿಸಲ್ಪಟ್ಟರೂ ವನಿಂದು ಹಸರಂಗ ಶೌರ್ಯ ಪ್ರದರ್ಶಿಸಿದ್ದಾರೆ. ಮುಹಮ್ಮದ್ ಸಿರಾಜ್ ಲಕ್ನೊ ವಿರುದ್ಧ ಪಂದ್ಯಕ್ಕೆ ವಾಪಸಾಗಿದ್ದಾರೆ. ಹೊಸ ಚೆಂಡಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 19ನೇ ಓವರ್‌ನಲ್ಲಿ ಬಿಗಿ ಬೌಲಿಂಗ್ ಮಾಡಿದ್ದ ಜೋಶ್ ಹೇಝಲ್‌ವುಡ್ ತಾನೊಬ್ಬ ಉತ್ತಮ ಡೆತ್ ಓವರ್ ಬೌಲರ್ ಎಂಬ ಹಿರಿಮೆ ಉಳಿಸಿಕೊಂಡಿದ್ದಾರೆ. ಜೋಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್‌ರನ್ನು ಹೆಚ್ಚಾಗಿ ಅವಲಂಬಿಸಿರುವ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ರಾಜಸ್ಥಾನಕ್ಕೆ ಸವಾಲಾಗಲು ಆರ್‌ಸಿಬಿ ಬೌಲರ್‌ಗಳು ಸಜ್ಜಾಗಿದ್ದಾರೆ. ಬಟ್ಲರ್ ಹಾಗೂ ಸ್ಯಾಮ್ಸನ್ ಗುಜರಾತ್ ವಿರುದ್ಧ ರನ್ ಗಳಿಸಿದ್ದರು. ಆದರೆ ಇದು ತಂಡದ ಗೆಲುವಿಗೆ ಸಾಕಾಗಲಿಲ್ಲ. ಗುಜರಾತ್ ವಿರುದ್ಧ ನೀರಸ ಪ್ರದರ್ಶನ ನೀಡಿದ್ದ ರಾಜಸ್ಥಾನ ಬೌಲರ್‌ಗಳು ಆರ್‌ಸಿಬಿ ವಿರುದ್ಧ ಹೇಗೆ ಆಡುತ್ತಾರೆಂದು ಕಾದು ನೋಡಬೇಕಾಗಿದೆ. ಆರ್.ಅಶ್ವಿನ್ ಗುಜರಾತ್ ಎದುರು ಉತ್ತಮ ಬೌಲಿಂಗ್ ಮಾಡಿರಲಿಲ್ಲ. ಪ್ರಸಿದ್ಧ ಕೃಷ್ಣ ಅಂತಿಮ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಆರ್ಭಟಕ್ಕೆ ತತ್ತರಿಸಿದ್ದರು. ಮಿಲ್ಲರ್ ಕೊನೆಯ ಓವರ್‌ನಲ್ಲಿ ಸತತ 3 ಸಿಕ್ಸರ್‌ಗಳನ್ನು ಸಿಡಿಸಿದ್ದರು.

ಪಂದ್ಯ ಆರಂಭದ ಸಮಯ: ರಾತ್ರಿ 7:30

ರಾಜಸ್ಥಾನ ಹಾಗೂ ಆರ್‌ಸಿಬಿ ಪರಸ್ಪರ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ 13 ಪಂದ್ಯಗಳಲ್ಲಿ ಜಯ ಸಾಧಿಸಿರುವ ಆರ್‌ಸಿಬಿ ಅಲ್ಪ ಮೇಲುಗೈ ಸಾಧಿಸಿದೆ. ರಾಜಸ್ಥಾನ 11ರಲ್ಲಿ ಜಯ ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಆರ್‌ಸಿಬಿ ತಂಡ ರಾಜಸ್ಥಾನ ವಿರುದ್ಧ ಆಡಿರುವ ಕಳೆದ 5 ಪಂದ್ಯಗಳ ಪೈಕಿ 4ರಲ್ಲಿ ಜಯ ಹಾಗೂ 1ರಲ್ಲಿ ಸೋತಿದೆ. ಈ ವರ್ಷದ ಐಪಿಎಲ್‌ನಲ್ಲಿ ಉಭಯ ತಂಡಗಳು ತಲಾ ಒಂದರಲ್ಲಿ ಜಯ ಸಾಧಿಸಿವೆ. ಮುಂಬೈನಲ್ಲಿ ಆರ್‌ಸಿಬಿ, ರಾಜಸ್ಥಾನವನ್ನು 4 ವಿಕೆಟ್‌ಗಳಿಂದ ಸೋಲಿಸಿದರೆ, ರಾಜಸ್ಥಾನವು ಆರ್‌ಸಿಬಿಯನ್ನು ಪುಣೆಯಲ್ಲಿ 29 ರನ್‌ನಿಂದ ಸೋಲಿಸಿತ್ತು.

ಅಂಕಿ-ಅಂಶ

ಜೋಸ್ ಬಟ್ಲರ್ 313 ಪಂದ್ಯಗಳ 291 ಇನಿಂಗ್ಸ್‌ಗಳಲ್ಲಿ 348 ಸಿಕ್ಸರ್‌ಗಳನ್ನು ಸಿಡಿಸಿದ್ದು, ಇನ್ನೆರಡು ಸಿಕ್ಸರ್‌ಗಳನ್ನು ಸಿಡಿಸಿದರೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 350 ಸಿಕ್ಸರ್ ಸಿಡಿಸಿದ ಇಂಗ್ಲೆಂಡ್‌ನ 3ನೇ ಹಾಗೂ ವಿಶ್ವದ 19ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

► ಹರ್ಷಲ್ ಪಟೇಲ್ 77 ಪಂದ್ಯಗಳಲ್ಲಿ 75 ಇನಿಂಗ್ಸ್‌ಗಳಲ್ಲಿ 97 ವಿಕೆಟ್‌ಗಳನ್ನು ಕಬಳಿಸಿದ್ದು, ಐಪಿಎಲ್‌ನಲ್ಲಿ ವಿಕೆಟ್ ಗಳಿಕೆಯಲ್ಲಿ ಶತಕ ಪೂರೈಸಿದ 19ನೇ ಬೌಲರ್ ಎನಿಸಿಕೊಳ್ಳಲು ಇನ್ನು 3 ವಿಕೆಟ್ ಅಗತ್ಯವಿದೆ.

ಹೆಡ್-ಟು-ಹೆಡ್

ಪಂದ್ಯಗಳು: 26

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಗೆಲುವು: 13

ರಾಜಸ್ಥಾನ ರಾಯಲ್ಸ್‌ಗೆ ಗೆಲುವು: 11

ಫಲಿತಾಂಶ ರಹಿತ: 02

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News