ಗುಜರಾತ್ ಗೆ ಐಪಿಎಲ್ ಟ್ರೋಫಿ: ಇತಿಹಾಸ ನಿರ್ಮಿಸಿದ ಮುಖ್ಯ ಕೋಚ್ ಆಶಿಶ್ ನೆಹ್ರಾ

Update: 2022-05-30 13:40 GMT
Photo: PTI

ಅಹಮದಾಬಾದ್: ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಮುಖ್ಯ ಕೋಚ್  ಆಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆದ್ದ ಮೊದಲ ಭಾರತೀಯರೆಂಬ ಹಿರಿಮೆಗೆ ಪಾತ್ರವಾಗುವುದರೊಂದಿಗೆ ಇತಿಹಾಸ ನಿರ್ಮಿಸಿದರು.

 ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ  ರವಿವಾರ ನಡೆದ ಐಪಿಎಲ್  ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 7 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿ ತಾನಾಡಿದ ಮೊದಲ ಟೂರ್ನಿಯಲ್ಲೇ ಪ್ರಶಸ್ತಿ ಎತ್ತಿ ಹಿಡಿದ ಬಳಿಕ ನೆಹ್ರಾ ಈ ಮಹಾನ್ ಸಾಧನೆ ಮಾಡಿದರು.

 ಆಶಿಶ್ ನೆಹ್ರಾ ಅವರು ಸರಿಯಾಗಿ 6 ​​ವರ್ಷಗಳ ಹಿಂದೆ ಮೇ 29 ರಂದು ಆಟಗಾರನಾಗಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ನೆಹ್ರಾ ಅವರು ಡೇವಿಡ್ ವಾರ್ನರ್ ನೇತೃತ್ವದಲ್ಲಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು

ನೆಹ್ರಾ ಅವರು   ಆಟಗಾರ ಮತ್ತು ಮುಖ್ಯ ತರಬೇತುದಾರರಾಗಿ  ಐಪಿಎಲ್ ಪ್ರಶಸ್ತಿಯನ್ನು ಗೆದ್ದಿರುವ ರಿಕಿ ಪಾಂಟಿಂಗ್ ಹಾಗೂ  ಶೇನ್ ವಾರ್ನ್ ಸೇರಿದಂತೆ ಆಯ್ದ ಕೆಲವರ ಸಾಧನೆಯನ್ನು ಸರಿಗಟ್ಟಿದ್ದಾರೆ.

ರವಿವಾರದ ಫೈನಲ್‌ಗೂ ಮುನ್ನ ಯಾವುದೇ ಭಾರತೀಯ ಮುಖ್ಯ ಕೋಚ್ ಐಪಿಎಲ್ ಟ್ರೋಫಿಯನ್ನು  ಗೆದ್ದಿರಲಿಲ್ಲ. ಅನಿಲ್ ಕುಂಬ್ಳೆ ಅವರು 2013 ಹಾಗೂ  2015 ರಲ್ಲಿ ಐಪಿಎಲ್-ವಿಜೇತ ಮುಂಬೈ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.

ನೆಹ್ರಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ ಗ್ಯಾರಿ ಕರ್ಸ್ಟನ್ ಜೊತೆಗೆ ಈ ಹಿಂದೆ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು. ಆದಾಗ್ಯೂ, 2019 ರ ಋತುವಿನ ನಂತರ ಇಬ್ಬರನ್ನು ವಜಾಗೊಳಿಸಲಾಗಿತ್ತು.

ನೆಹ್ರಾ ಹಾಗೂ  ಕರ್ಸ್ಟನ್ ಗುಜರಾತ್ ಟೈಟಾನ್ಸ್‌ನಲ್ಲಿ ಮತ್ತೆ ಒಂದಾದರು.  ಈ ಬಾರಿ ಕ್ರಮವಾಗಿ ಮುಖ್ಯ ಕೋಚ್ ಹಾಗೂ  ಮಾರ್ಗದರ್ಶಕರಾಗಿಕಾರ್ಯನಿರ್ವಹಿಸಿದ್ದಾರೆ.

 ಶುಭಮನ್ ಗಿಲ್ ಸಿಕ್ಸರ್ ಸಿಡಿಸಿ ಗುಜರಾತ್ 18.1 ಓವರ್ ನಲ್ಲಿ ಗೆಲುವಿನ ಗುರಿ 131 ರನ್ ತಲುಪಿದಾಗ ರವಿವಾರ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ಗುಜರಾತ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಳಿಕ ತವರು  ಪ್ರೇಕ್ಷಕರ ಸಮ್ಮುಖದಲ್ಲಿ ಐಪಿಎಲ್  ಪ್ರಶಸ್ತಿ ಜಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News