×
Ad

ರಣಜಿ ಟ್ರೋಫಿಯಲ್ಲಿ ಸೆಂಚುರಿ ಬಾರಿಸಿದ ಕ್ರೀಡಾ ಸಚಿವ !

Update: 2022-06-10 15:18 IST
Photo: twitter

ಬೆಂಗಳೂರು: ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ ಅವರು ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಬಂಗಾಳ ಕ್ರಿಕೆಟ್ ತಂಡದ ಪರ  ಆಡುತ್ತಿದ್ದು, ಪಂದ್ಯದ ಎರಡು ಇನಿಂಗ್ಸ್ ಗಳಲ್ಲಿ 73 ಹಾಗೂ  136 ರನ್ ಗಳಿಸಿದ್ದಾರೆ.

ತಿವಾರಿ ಅವರು 28 ನೇ ಪ್ರಥಮ ದರ್ಜೆ ಶತಕವನ್ನು ಗಳಿಸಿದ ನಂತರ ಶಿಖರ್ ಧವನ್ ರೀತಿಯಲ್ಲಿ   ಸಂಭ್ರಮಿಸಿದರು.

 ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿಯ ನಾಲ್ಕನೇ ಕ್ವಾರ್ಟರ್ ಫೈನಲ್‌ನ ಅಂತಿಮ ದಿನವಾದ ಶುಕ್ರವಾರದಂದು ಬಂಗಾಳ ಎರಡನೇ ಇನಿಂಗ್ಸ ನಲ್ಲಿ  318 ರನ್ ಗಳಿಸಿ ಇನಿಂಗ್ಸ್ ಡಿಕ್ಳೇರ್ ಮಾಡಿತು.  ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಬಂಗಾಳ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್  ನಷ್ಟಕ್ಕೆ 773 ರನ್ ಗಳಿಸಿತ್ತು.

ಬಂಗಾಳದ ಕ್ರೀಡಾ ಸಚಿವರಾದ ತಿವಾರಿ  2ನೇ ಇನಿಂಗ್ಸ್ ನಲ್ಲಿ 185 ಎಸೆತಗಳಲ್ಲಿ 136 ರನ್(19 ಬೌಂಡರಿ, 2 ಸಿಕ್ಸರ್)  ಗಳಿಸಿದರು. ಬಂಗಾಳದ ಕ್ರೀಡಾ ಸಚಿವರಾದ ನಂತರ ಇದು ಅವರು ಗಳಿಸಿರುವ  ಮೊದಲ ಪ್ರಥಮ ದರ್ಜೆ ಶತಕವಾಗಿದೆ.

ತಿವಾರಿ  2019-20ರ ಋತುವಿನಲ್ಲಿ ಹೈದರಾಬಾದ್ ವಿರುದ್ಧ ಅಜೇಯ 303  ರನ್ ಗಳಿಸಿದ್ದರು. ಮನೋಜ್ ಅವರು ಬಂಗಾಳ ತಂಡದ ಬ್ಯಾಟಿಂಗ್  ಸರದಿಯ ಪ್ರಮುಖ ಸದಸ್ಯರಾಗಿದ್ದು, ತಂಡದಲ್ಲಿನ ಯುವಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

36 ರ  ವಯಸ್ಸಿನ ಬಂಗಾಳದ ಮಾಜಿ ನಾಯಕ ತಿವಾರಿ ಅವರು 2021ರಲ್ಲಿ ಪಶ್ಚಿಮಬಂಗಾಳದ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಟಿಎಂಸಿಗೆ ಸೇರ್ಪಡೆಗೊಂಡಿದ್ದರು.  ಪ್ರತಿಸ್ಪರ್ಧಿ  ಬಿಜೆಪಿಯ ರತಿನ್ ಚಕ್ರವರ್ತಿ ಅವರನ್ನು ಸೋಲಿಸಿ ಶಿಬ್ಪುರ್ ಕ್ಷೇತ್ರವನ್ನು ಗೆದ್ದುಕೊಂಡಿದ್ದರು.

ತಿವಾರಿ ಅವರು  ಪ್ರಸ್ತುತ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳದ ಸರಕಾರದಲ್ಲಿ  ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News