×
Ad

3 ಓವರ್‌ಗಳಲ್ಲಿ 59 ರನ್‌ಗಳ ಅಗತ್ಯವಿದ್ದಾಗ ಶ್ರೀಲಂಕಾಕ್ಕೆ ರೋಚಕ ಜಯ ತಂದುಕೊಟ್ಟ ಶನಕ

Update: 2022-06-12 13:06 IST

ಕೊಲಂಬೊ: ಈಗಾಗಲೇ ಸರಣಿಯನ್ನು ಬಾಚಿಕೊಂಡಿದ್ದ  ಆಸ್ಟ್ರೇಲಿಯಾವು ಶ್ರೀಲಂಕಾ ವಿರುದ್ಧ ಅವರದೇ ಅಂಗಳದಲ್ಲಿ ವೈಟ್‌ವಾಶ್ ಅನ್ನು ಸಾಧಿಸುವ ಗುರಿಯೊಂದಿಗೆ ಶನಿವಾರ ಅಂತಿಮ ಟ್ವೆಂಟಿ 20 ಅಂತರ್ ರಾಷ್ಟ್ರೀಯ ಪಂದ್ಯವನ್ನಾಡಲು ಕಣಕ್ಕಿಳಿದಿತ್ತು. ಪಂದ್ಯದ ಸುಮಾರು ಮುಕ್ಕಾಲು ಭಾಗದವರೆಗೆ  ಆಸ್ಟ್ರೇಲಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಸ್ಥಿತಿಯಲ್ಲಿತ್ತು. ಆದರೆ, ಶ್ರೀಲಂಕಾದ ನಾಯಕ ದಸುನ್ ಶನಕ  ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು.  ಶ್ರೀಲಂಕಾವನ್ನು ಸೋಲಿನ ದವಡೆಯಿಂದ ಪಾರು ಮಾಡಿದ ಶನಕ ರೋಚಕ ಗೆಲುವು ಸಾಧಿಸಲು ನೆರವಾದರು.

ಶ್ರೀಲಂಕಾಕ್ಕೆ ಗೆಲ್ಲಲು ಅಂತಿಮ ಮೂರು ಓವರ್‌ಗಳಲ್ಲಿ 59 ರನ್‌ಗಳ ಅಗತ್ಯವಿತ್ತು. ಶ್ರೀಲಂಕಾ ಪಂದ್ಯ ಗೆಲ್ಲುತ್ತದೆ ಎಂದು ಯಾರೂ ಭರವಸೆಯನ್ನು ಇಟ್ಟಿರಲಿಲ್ಲ. ಆದರೆ ಶನಕ ಅವರು ಆಸ್ಟ್ರೇಲಿಯದ ಬೌಲರ್‌ಗಳ ಮೇಲೆ ಮುಗಿಬಿದ್ದು  ಒಂದು ಚೆಂಡು ಬಾಕಿ ಇರುವಾಗಲೇ ಶ್ರೀಲಂಕಾ ಪಂದ್ಯವನ್ನು ಗೆಲ್ಲಲು ಕಾರಣರಾದರು.

ಶ್ರೀಲಂಕಾ 15ನೇ ಓವರ್‌ನಲ್ಲಿ 6 ವಿಕೆಟ್‌ಗೆ 108 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆಗ ಜೊತೆಯಾದ  ಶನಕ ಹಾಗೂ  ಚಮಿಕಾ ಕರುಣಾರತ್ನೆ (ಔಟಾಗದೆ 14 ರನ್) ಏಳನೇ ವಿಕೆಟ್‌ಗೆ 69 ರನ್‌ಗಳ  ಜೊತೆಯಾಟದಲ್ಲಿ ಪಾಲ್ಗೊಂಡರು.

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯದ  ವಿರುದ್ಧ ಶೋಚನೀಯವಾಗಿ ಸೋತಿದ್ದ ಶ್ರೀಲಂಕಾ ಕೊನೆಯ ಪಂದ್ಯದಲ್ಲಿ  177 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.

ಶನಕ 25 ಎಸೆತಗಳಲ್ಲಿ ಐದು ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ ಅಜೇಯ 54 ರನ್ ಗಳಿಸಿ  ಶ್ರೀಲಂಕಾಕ್ಕೆ 19.5 ಓವರ್ ಗಳಲ್ಲಿ ನಾಲ್ಕು ವಿಕೆಟ್‌ಗಳ ಜಯ ತಂದುಕೊಟ್ಟರು..

ಕೇನ್ ರಿಚರ್ಡ್‌ಸನ್ ಎಸೆದ ಅಂತಿಮ ಓವರ್‌ನಲ್ಲಿ ಲಂಕಾ ಗೆಲುವಿಗೆ  19 ರನ್‌ಗಳ ಅಗತ್ಯವಿತ್ತು. ಆಗ ನಾಯಕ ಶನಕ  ಎರಡು ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಒಂದು ಎಸೆತ ಬಾಕಿ ಇರುವಂತೆಯೇ  ತಂಡಕ್ಕೆ ಗೆಲುವು ತಂದರು. ರಿಚರ್ಡ್‌ಸನ್  3 ವೈಡ್ ಎಸೆದರು.

ಆಸ್ಟ್ರೇಲಿಯದ ನಾಯಕ ಆ್ಯರೊನ್   ಫಿಂಚ್  ಅವರು ಶನಕ ಅವರ ಬ್ಯಾಟಿಂಗ್ ಸಾಹಸವನ್ನು  "ನಂಬಲಾಗದ ಇನಿಂಗ್ಸ್" ಎಂದು ಕರೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News