ಮೂರನೇ ಟ್ವೆಂಟಿ-20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2022-06-14 17:11 GMT
ಹರ್ಷಲ್ ಪಟೇಲ್, Photo:twitter 

   ವಿಶಾಖಪಟ್ಟಣ, ಜೂ.14: ಹರ್ಷಲ್ ಪಟೇಲ್(4-25) ಹಾಗೂ ಯಜುವೇಂದ್ರ ಚಹಾಲ್(3-20) ಅಮೋಘ ಬೌಲಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆದ 3ನೇ ಟ್ವೆಂಟಿ-20 ಪಂದ್ಯವನ್ನು 48 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

ಗೆಲ್ಲಲು 180 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 19.1 ಓವರ್‌ಗಳಲ್ಲಿ 131 ರನ್‌ಗೆ ಆಲೌಟಾಯಿತು. ಆಫ್ರಿಕದ ಪರ ಹೆನ್ರಿಕ್ ಕ್ಲಾಸೆನ್(29 ರನ್, 24 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ವೇಯ್ನೋ ಪಾರ್ನೆಲ್(ಔಟಾಗದೆ 22), ರೀಝಾ ಹೆಂಡ್ರಿಕ್ಸ್(23 ರನ್,20 ಎಸೆತ) ಹಾಗೂ ಡ್ವೆಯ್ನೆ ಪ್ರಿಟೋರಿಯಸ್(20 ರನ್, 16 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಆರಂಭಿಕ ಬ್ಯಾಟರ್‌ಗಳಾದ ಋತುರಾಜ್ ಗಾಯಕ್ವಾಡ್(57 ರನ್, 35 ಎಸೆತ, 7 ಬೌಂಡರಿ, 2 ಸಿಕ್ಸರ್)ಹಾಗೂ ಇಶಾನ್ ಕಿಶನ್(54 ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ಗಾಯಕ್ವಾಡ್ ಹಾಗೂ ಕಿಶನ್ ಮೊದಲ ವಿಕೆಟ್‌ಗೆ 97 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ಗಾಯಕ್ವಾಡ್ ಸ್ಪಿನ್ನರ್ ಕೇಶವ ಮಹಾರಾಜ್‌ಗೆ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ ಶ್ರೇಯಸ್ ಅಯ್ಯರ್(14 ರನ್) ಹಾಗೂ ಕಿಶನ್ ಎರಡನೇ ವಿಕೆಟ್‌ಗೆ 31 ರನ್ ಸೇರಿಸಿದರು. ನಾಯಕ ರಿಷಭ್ ಪಂತ್(6 ರನ್)ಹಾಗೂ ದಿನೇಶ್ ಕಾರ್ತಿಕ್(6 ರನ್)ಬೆನ್ನುಬೆನ್ನಿಗೆ ಔಟಾದರು.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಔಟಾಗದೆ 31 ರನ್(21 ಎಸೆತ, 4 ಬೌಂಡರಿ) ಗಳಿಸಿ ತಂಡದ ಮೊತ್ತವನ್ನು 180ರ ಗಡಿ ತಲುಪಿಸಿದರು. ದಕ್ಷಿಣ ಆಫ್ರಿಕಾದ ಪರ ಡ್ವೆಯ್ನೆ ಪ್ರಿಟೋರಿಯಸ್(2-29) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News