ಅಫ್ಘನ್‌ ಟಿವಿ ನಿರೂಪಕ ಈಗ ರಸ್ತೆ ಬದಿ ವ್ಯಾಪಾರಿ: ಪತ್ರಕರ್ತ ಮೂಸಾ ಮೊಹಮ್ಮದಿ ಚಿತ್ರ ವೈರಲ್‌

Update: 2022-06-16 17:40 GMT
photo: twitter/Haqmal

ಕಾಬೂಲ್:‌ ತಾಲಿಬಾನ್ ಅಫ್ಘನ್‌ ದೇಶದ ಮೇಲೆ ಹಿಡಿತ ಸಾಧಿಸಿದಾಗಿನಿಂದ ಅಫ್ಘಾನಿಸ್ತಾನವು ಸಾಕಷ್ಟು ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ದೇಶದ ಆರ್ಥಿಕತೆ ಹಳ್ಳ ಹಿಡಿದಿದ್ದು, ಜನರು ಉದ್ಯೋಗಗಳಿಲ್ಲದೆ ಪರದಾಡುತ್ತಿದ್ದಾರೆ ಎಂದು ವರದಿಯಾಗುತ್ತಿದೆ.

ಈ ನಡುವೆ, ಅಫ್ಗಾನಿಸ್ತಾನದ ಮಾಜಿ ಟಿವಿ ನಿರೂಪಕ ಮೂಸಾ ಮೊಹಮ್ಮದಿ ರಸ್ತೆ ಬದಿಯಲ್ಲಿ ಆಹಾರ ಪದಾರ್ಥ ಮಾರಾಟ ಮಾಡುತ್ತಿರುವ ಚಿತ್ರಗಳನ್ನು ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ್ದ ಮಾಜಿ ಅಧಿಕಾರಿ, ಪತ್ರಕರ್ತ ಕಬೀರ್ ಹಕ್ಮಲ್ ಅವರು ಟ್ವಿಟರ್‌ನಲ್ಲಿ ಬುಧವಾರ ಹಂಚಿಕೊಂಡಿದ್ದಾರೆ. ಈ ಟ್ವಿಟರ್ ಪೋಸ್ಟ್, ರಾಷ್ಟ್ರದಲ್ಲಿ ಪ್ರತಿಭಾವಂತ ವೃತ್ತಿಪರರು ಎಂತಹಾ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ.

 ಹಕ್ಮಲ್ ಅವರು ಅಫ್ಘಾನ್ ಪತ್ರಕರ್ತ ಮೂಸಾ ಮೊಹಮ್ಮದಿ ಅವರ ಫೋಟೋವನ್ನು ಹಂಚಿಕೊಂಡಿದ್ದು, ʼಮೊಹಮ್ಮದಿ ವರ್ಷಗಳ ಕಾಲ ಮಾಧ್ಯಮ ಕ್ಷೇತ್ರದ ಭಾಗವಾಗಿದ್ದರು, ಆದಾಗ್ಯೂ, ಅಫ್ಘಾನಿಸ್ತಾನದಲ್ಲಿ ಇಂತಹ ಭೀಕರ ಆರ್ಥಿಕ ಪರಿಸ್ಥಿತಿಯ ನಡುವೆ, ಅವರು ಈಗ ತಮ್ಮ ಜೀವನವನ್ನು ಪೂರೈಸಲು ಆಹಾರವನ್ನು ಮಾರಾಟ ಮಾಡುತ್ತಿದ್ದಾರೆʼ ಎಂದು ಅವರು ಬರೆದಿದ್ದಾರೆ.

“ಮೂಸಾ ಮೊಹಮ್ಮದಿ ಅವರು ವಿವಿಧ ಟಿವಿ ಚಾನೆಲ್‌ಗಳಲ್ಲಿ ಆಂಕರ್ ಮತ್ತು ವರದಿಗಾರರಾಗಿ ವರ್ಷಗಳ ಕಾಲ ಕೆಲಸ ಮಾಡಿದ್ದರು.‌ ಅದಾಗ್ಯೂ, ಈಗ ಅವರ ಕುಟುಂಬವನ್ನು ಪೋಷಿಸಲು ಅವರಿಗೆ ಯಾವುದೇ ಆದಾಯವಿಲ್ಲ. ಹಾಗಾಗಿ, ಹಣವನ್ನು ಗಳಿಸಲು ಬೀದಿ ಬದಿಯಲ್ಲಿ ಆಹಾರವನ್ನು ಮಾರಾಟ ಮಾಡುತ್ತಾರೆ. ಗಣರಾಜ್ಯದ ಪತನದ ನಂತರ ಆಫ್ಘನ್ನರು ಭೀಕರ ಬಡತನವನ್ನು ಅನುಭವಿಸುತ್ತಾರೆ, ” ಎಂದು ಅವರು ಹೇಳಿದ್ದಾರೆ.

ಈ ಟ್ವೀಟ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಇದು ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರ ಗಮನಕ್ಕೆ ಬಂದಿದೆ. ಮೊಹಮ್ಮದಿ ಅವರನ್ನು ತಮ್ಮ ಇಲಾಖೆಗೆ ನೇಮಿಸುವುದಾಗಿ ವಾಸಿಕ್ ತಿಳಿಸಿದ್ದಾರೆ ಎಂದು ndtv ವರದಿ ಮಾಡಿದೆ.

 ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಂದಿನಿಂದ, ದೇಶವು ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಪತ್ರಕರ್ತರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ರಾಯಿಟರ್ಸ್ ಪ್ರಕಾರ, 2021 ರ ಕೊನೆಯ ನಾಲ್ಕು ತಿಂಗಳುಗಳಲ್ಲಿ ತಲಾ ಆದಾಯವು ಮೂರನೇ ಒಂದು ಭಾಗದಷ್ಟು ಕುಸಿದಿರುವುದರಿಂದ ಅಫ್ಘಾನಿಸ್ತಾನದ ಆರ್ಥಿಕತೆಯ ದೃಷ್ಟಿಕೋನವು ಭೀಕರವಾಗಿದೆ ಎಂದು ವಿಶ್ವ ಬ್ಯಾಂಕ್ ಇತ್ತೀಚೆಗೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News