ಸ್ವಿಸ್‍ ಬ್ಯಾಂಕ್‍ಗಳಲ್ಲಿ ಭಾರತೀಯರ ಠೇವಣಿ ಶೇಕಡ 50 ಹೆಚ್ಚಳ!

Update: 2022-06-17 07:28 GMT

ಹೊಸದಿಲ್ಲಿ/ ಜೂರಿಚ್: ಸ್ವಿಡ್ಝರ್‍ಲೆಂಡ್‍ನ ಬ್ಯಾಂಕ್‍ಗಳ ಭಾರತೀಯ ಶಾಖೆಗಳು ಸೇರಿದಂತೆ ಸ್ವಿಸ್ ಬ್ಯಾಂಕ್‍ಗಳಲ್ಲಿ ಭಾರತೀಯ ಪ್ರಜೆಗಳು ಮತ್ತು ಸಂಸ್ಥೆಗಳು 2021ರಲ್ಲಿ ಠೇವಣಿ ಇಟ್ಟಿರುವ ಹಣ 14 ವರ್ಷಗಳಲ್ಲೇ ಗರಿಷ್ಠ ಅಂದರೆ 3.83 ಶತಕೋಟಿ ಸ್ವಿಸ್ ಫ್ರಾಂಕ್‍ಗಳಿಗೆ ಏರಿದೆ. ಇದು ಸುಮಾರು 30,500 ಕೋಟಿ ರೂಪಾಯಿಗಳಿಗೆ ಸಮ.

ಸೆಕ್ಯುರಿಟಿಗಳು ಮತ್ತು ಇಂಥದ್ದೇ ಇತರ ಹಣಕಾಸು ಸಾಧನಗಳ ಜತೆ ಗ್ರಾಹಕರ ಠೇವಣಿ ಕೂಡಾ ವ್ಯಾಪಕವಾಗಿ ಹೆಚ್ಚಿರುವುದು ಸ್ವಿಡ್ಝರ್‍ಲೆಂಡ್‍ನ ಕೇಂದ್ರೀಯ ಬ್ಯಾಂಕ್ ಗುರುವಾರ ಪ್ರಕಟಿಸಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

2020ರ ಕೊನೆಗೆ ಭಾರತೀಯ ಗ್ರಾಹಕರು ಸ್ವಿಸ್ ಬ್ಯಾಂಕ್‍ನಲ್ಲಿ ಇಟ್ಟ ಒಟ್ಟು ಠೇವಣಿ ಪ್ರಮಾಣ 2.55 ಶತಕೋಟಿ ಸ್ವಿಸ್ ಫ್ರಾಂಕ್ (ರೂ. 20,700 ಕೋಟಿ) ಆಗಿತ್ತು. ಇದೀಗ ಸತತ ಎರಡನೇ ವರ್ಷ ಏರಿಕೆ ಕಂಡಿದೆ. ಇದರ ಜತೆಗೆ ಭಾರತೀಯ ಗ್ರಾಹಕರ ಉಳಿತಾಯ ಹಾಗೂ ಠೇವಣಿ ಖಾತೆಗಳಲ್ಲಿನ ಮೊತ್ತ ಏಳು ವರ್ಷಗಳಲ್ಲೇ ಗರಿಷ್ಠ ಅಂದರೆ 4800 ಕೋಟಿ ರೂಪಾಯಿ ತಲುಪಿದೆ ಎಂದು newindianexpress.com ವರದಿ ಮಾಡಿದೆ.

ಸ್ವಿಡ್ಝರ್‍ಲೆಂಡ್‍ನ ಎಲ್ಲ ಬ್ಯಾಂಕ್‍ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಭಾರತೀಯ ಗ್ರಾಹಕರಿಗೆ ಹೊಂದಿರುವ ಒಟ್ಟು ಹೊಣೆಗಾರಿಕೆ 3,831.91 ದಶಲಕ್ಷ ಸಿಎಚ್‍ಎಫ್ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ ಹೇಳಿದೆ.

ಸ್ವಿಸ್ ಬ್ಯಾಂಕ್‍ಗಳಲ್ಲಿ ಭಾರತೀಯರ ಇದುವರೆಗಿನ ದಾಖಲೆ ಮೊತ್ತವೆಂದರೆ 2006ರಲ್ಲಿ ಇದ್ದ 6.5 ಶತಕೋಟಿ ಸ್ವಿಸ್ ಫ್ರಾಂಕ್‍ಗಳು. 2011, 2013, 2017 ಮತ್ತು 2020ನ್ನು ಹೊರತುಪಡಿಸಿದರೆ ಉಳಿದೆಲ್ಲ ವರ್ಷಗಳಲ್ಲಿ ಇದು ಇಳಿಕೆ ಪ್ರವೃತ್ತಿಯನ್ನು ಕಂಡಿತ್ತು. ಇದೀಗ 2021ರಲ್ಲಿ ಮೊತ್ತದಲ್ಲಿ ಏರಿಕೆಯಾಗಿದೆ ಎಂದು ಎಸ್‍ಎನ್‍ಬಿ ಅಂಕಿ ಅಂಶಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News