ವಾಷಿಂಗ್ಟನ್‌ನಲ್ಲಿ ಪತ್ರಕರ್ತ ಜಮಾಲ್ ಖಶೋಗಿ ರಸ್ತೆ ಅನಾವರಣ

Update: 2022-06-17 17:38 GMT
Photo: Twitter/@LinaAlhathloul

ವಾಷಿಂಗ್ಟನ್, ಜೂ.17: ಅಮೆರಿಕದಲ್ಲಿನ ಸೌದಿ ಅರೆಬಿಯಾ ದೂತಾವಾಸದ ಎದುರಿಗಿರುವ ರಸ್ತೆಗೆ, ಹತ್ಯೆಯಾದ ಪತ್ರಕರ್ತ ಜಮಾಲ್ ಖಶೋಗಿಯ ಹೆಸರನ್ನು ಇಡಲಾಗಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್ ಡಿಸಿಯ ನ್ಯೂ ಹ್ಯಾಂಪ್ಶೈರ್ ಅವೆನ್ಯೂವಿನಲ್ಲಿ ಇದುವರೆಗೆ ಸೌದಿ ದೂತಾವಾಸ ರಸ್ತೆ ಎಂದು ಹೆಸರಿದ್ದ ರಸ್ತೆಗೆ ಜಮಾಲ್ ಖಶೋಗಿ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ. ಭಿನ್ನಮತೀಯರ ನೆನಪನ್ನು ಮುಚ್ಚಿಡಲಾಗದು ಎಂಬುದನ್ನು ಖಾತರಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೌದಿ ಅರೆಬಿಯಾದ ಭಿನ್ನಮತೀಯ ಪತ್ರಕರ್ತರಾಗಿದ್ದ ಖಶೋಗಿ ಅಮೆರಿಕದಲ್ಲಿ ನೆಲೆಸಿದ್ದರು ಮತ್ತು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರರಾಗಿದ್ದರು.

ಅವರನ್ನು ಆಮಿಷವೊಡ್ಡಿ ಟರ್ಕಿಯಲ್ಲಿರುವ ಸೌದಿ ಅರೆಬಿಯಾದ ದೂತಾವಾಸಕ್ಕೆ ಕರೆಸಿಕೊಂಡು ಅಲ್ಲಿ ಸೌದಿಯ ಏಜೆಂಟರು ಹತ್ಯೆ ಮಾಡಿದ್ದರು. ಸೌದಿಯ ಯುವರಾಜರ ಸಮ್ಮತಿ ಮೇರೆಗೆ ಹತ್ಯೆ ನಡೆದಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ವರದಿ ಮಾಡಿತ್ತು. ಇದನ್ನು ಸೌದಿಯ ಯುವರಾಜರು ನಿರಾಕರಿಸಿದ್ದರು. ರಸ್ತೆ ಮರುನಾಮಕರಣ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು, ಅಮೆರಿಕ ಸಂಸತ್ ಸದಸ್ಯರು ಹಾಗೂ ಸ್ಥಳೀಯ ಕೌನ್ಸಿಲರ್ಗಳು ಪಾಲ್ಗೊಂಡಿದ್ದರು. ‘ ಆ ಬಾಗಿಲಿನ ಮರೆಯಲ್ಲಿ ಅವಿತುಕೊಂಡಿರುವ ಜನರಿಗೆ ಪ್ರತೀ ದಿನ, ಪ್ರತೀ ಗಂಟೆ ಮತ್ತು ಪ್ರತೀ ಕ್ಷಣವೂ ಇದು ಜಮಾಲ್ ಖಶೋಗಿ ಮಾರ್ಗ ಎಂದು ನೆನಪಿಸಲು ಉದ್ದೇಶಿಸಿದ್ದೇವೆ’ ಎಂದು ಖಶೋಗಿ ಸ್ಥಾಪಿಸಿದ್ದ ‘ಡೆಮಾಕ್ರಸಿ ಫಾರ್ ದಿ ಅರಬ್ ವರ್ಲ್ಡ್ ನೌ’ (ಡಾನ್)ನ ಕಾರ್ಯನಿರ್ವಾಹಕ ನಿರ್ದೇಶಕಿ ಸಾರಾ ವಿಟ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News