ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್

Update: 2022-06-17 14:41 GMT
ಜೋಸ್ ಬಟ್ಲರ್, Photo:twitter, england cricket

ಲಂಡನ್, ಜೂ.17: ಆರಂಭಿಕ ಬ್ಯಾಟರ್‌ಗಳಾದ ಫಿಲ್ ಸಾಲ್ಟ್(122 ರನ್, 93 ಎಸೆತ, 14 ಬೌಂಡರಿ, 3 ಸಿಕ್ಸರ್),ಡೇವಿಡ್ ಮಲಾನ್(125 ರನ್, 109 ಎಸೆತ, 9 ಬೌಂ., 3 ಸಿ.), ವಿಕೆಟ್‌ಕೀಪರ್ ಜೋಸ್ ಬಟ್ಲರ್(ಔಟಾಗದೆ 162 ರನ್) ಹಾಗೂ ಲಿಯಾಮ್ ಸ್ಟೋನ್(ಔಟಾಗದೆ 66) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ನೆದರ್‌ಲ್ಯಾಂಡ್ ವಿರುದ್ಧ ಶುಕ್ರವಾರ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 498 ರನ್ ಗಳಿಸಿತು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಮೊತ್ತ ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿತು.

ಇಂಗ್ಲೆಂಡ್ ರನ್ ಶಿಖರವನ್ನೇರುವ ಮೂಲಕ ತಾನೇ ಈ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಮುರಿಯಿತು. ಇಂಗ್ಲೆಂಡ್ 2018ರ ಜೂನ್‌ನಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 6 ವಿಕೆಟ್ ನಷ್ಟಕ್ಕೆ 481 ರನ್ ಗಳಿಸಿತ್ತು. ಪುರುಷರ ಹಾಗೂ ಮಹಿಳಾ ಕ್ರಿಕೆಟ್‌ನಲ್ಲೂ ಬ್ರಿಟನ್ ಗರಿಷ್ಠ ಏಕದಿನ ಸ್ಕೋರ್ ಗಳಿಸಿದೆ. ಇಂಗ್ಲೆಂಡ್‌ನ ಇಡೀ ಇನಿಂಗ್ಸ್‌ನಲ್ಲಿ 26 ಸಿಕ್ಸರ್ ಹಾಗೂ 36 ಬೌಂಡರಿಗಳು ದಾಖಲಾಗಿವೆ. 46ನೇ ಓವರ್‌ನಲ್ಲಿ 32 ರನ್ ಗಳಿಸಿದ ಲಿವಿಂಗ್‌ಸ್ಟೋನ್ 2007ರಲ್ಲಿ ಭಾರತ ವಿರುದ್ಧ 30 ರನ್ ಗಳಿಸಿದ್ದ ಇಂಗ್ಲೆಂಡ್‌ನ ಡಿಮಿಟ್ರಿ ಮಸ್ಕರೇನ್ಹಸ್ ದಾಖಲೆಯನ್ನು ಮುರಿದರು.

 ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಜೇಸನ್ ರಾಯ್ ವಿಕೆಟ್ ಕಳೆದುಕೊಂಡಿತು. ಆನಂತರ ಫಿಲ್ ಸಾಲ್ಟ್ ಹಾಗೂ ಡೇವಿಡ್ ಮಲಾನ್ ನೆದರ್‌ಲ್ಯಾಂಡ್ ಬೌಲರ್‌ಗಳ ಬೆಂಡೆತ್ತಿದರು. ಔಟಾಗುವ ಮೊದಲು ಸಾಲ್ಟ್ ಹಾಗೂ ಮಲಾನ್ ಇಬ್ಬರೂ ಶತಕ ಸಿಡಿಸಿದರು. ಈ ಇಬ್ಬರು ಔಟಾದ ನಂತರ ಜೋಸ್ ಬಟ್ಲರ್(ಔಟಾಗದೆ 162 ರನ್, 70 ಎಸೆತ, 7 ಬೌಂಡರಿ, 14 ಸಿಕ್ಸರ್) ಹಾಗೂ ಲಿವಿಂಗ್‌ಸ್ಟೋನ್ (ಔಟಾಗದೆ 66 ರನ್,22 ಎಸೆತ, 6 ಬೌಂಡರಿ, 6 ಸಿಕ್ಸರ್)ತಂಡದ ಮೊತ್ತವನ್ನು 498 ರನ್‌ಗೆ ತಲುಪಿಸಿದರು. ಆಂಗ್ಲರಿಗೆ ಬರೋಬ್ಬರಿ 500 ರನ್ ಗಳಿಸಲು ಎರಡು ರನ್ ಕೊರತೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News