​ಇಂಡೋನೇಶ್ಯಾ: ನೂತನ ವೀಸಾ ವ್ಯವಸ್ಥೆ ಜಾರಿ

Update: 2022-06-23 17:01 GMT

ಜಕಾರ್ತ, ಜೂ.24: ಕಚೇರಿಯಿಂದ ಹೊರಗಿದ್ದುಕೊಂಡು ಕಾರ್ಯನಿರ್ವಹಿಸುವ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಇಂಡೋನೇಶ್ಯಾವು ಡಿಜಿಟಲ್ ಸಂಚಾರಿ ವೀಸಾ ಎಂಬ ನೂತನ ವೀಸಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ ಎಂದು ಅಲ್ಲಿನ ಪ್ರವಾಸೋದ್ಯಮ ಇಲಾಖೆಯ ಸಚಿವ ಸ್ಯಾಂಡಿಯಾಗೊ ಉನೊ ಹೇಳಿದ್ದಾರೆ. 

ಬಾಲಿ ಮುಂತಾದ ಜನಪ್ರಿಯ ದ್ವೀಪಗಳಲ್ಲಿ 5 ವರ್ಷಗಳವರೆಗೆ ತೆರಿಗೆ ಮುಕ್ತವಾಗಿ ವಾಸಿಸಲು ಈ ವೀಸಾ ಅನುವು ಮಾಡಿಕೊಡುತ್ತದೆ. ಈ ಅವಧಿಯಲ್ಲಿ ಅವರ ಗಳಿಕೆಯು ದೇಶದ ಹೊರಗಿನಿಂದ ಬರಬೇಕು ಎಂಬ ಷರತ್ತು ಅನ್ವಯಿಸುತ್ತದೆ ಎಂದವರು ಹೇಳಿದ್ದಾರೆ.

 ವಿದೇಶಗಳಲ್ಲಿ ಮನೆಯಿಂದ ಕೆಲಸ ಅಥವಾ ಕಚೇರಿಯಿಂದ ಹೊರಗಿದ್ದುಕೊಂಡು ಕೆಲಸ ಮಾಡುವ ವ್ಯವಸ್ಥೆಯಿದೆ. ಇಂತಹ ಉದ್ಯೋಗಿಗಳಲ್ಲಿ 95%ದಷ್ಟು ಮಂದಿ ಇಂಡೋನೇಶ್ಯಾದ ದ್ವೀಪಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬುದು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ನೂತನ ವೀಸಾ ನೀತಿಯು 3.6 ಮಿಲಿಯನ್ ಸಾಗರೋತ್ತರ ಪ್ರವಾಸಿಗರನ್ನು ದೇಶದತ್ತ ಆಕರ್ಷಿಸಲಿದೆ ಮತ್ತು ಸ್ಥಳೀಯರಿಗೆ 1 ಮಿಲಿಯನ್ ಉದ್ಯೋಗಾವಕಾಶ ಒದಗಿಸಲಿದೆ. 

ಕಳೆದ ವರ್ಷವೇ ನೂತನ ವೀಸಾ ಜಾರಿಗೆ ಚಿಂತಿಸಲಾಗಿತ್ತು. ಆದರೆ ಕೊರೋನ ಸಾಂಕ್ರಾಮಿಕದಿಂದ ಅದನ್ನು ಮುಂದೂಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಪ್ರಸ್ತುತ, ಇಂಡೋನೇಶ್ಯಾಕ್ಕೆ ಆಗಮಿಸುವ ಉದ್ಯೋಗಿಗಳಿಗೆ ‘ವೀಸಾ ಆನ್ ಅರೈವಲ್, ಟೂರಿಸ್ಟ್ ಆಫ್ ಕಲ್ಚರಲ್ ವೀಸಾ, ಫ್ರೀ ವೀಸಾ’ ಮುಂತಾದ ವಿವಿಧ ವೀಸಾಗಳಿವೆ. ಆದರೆ ಇವುಗಳ ಅವಧಿ 30 ದಿನದಿಂದ 180 ದಿನ ಮಾತ್ರವಾಗಿದೆ. ಆದ್ದರಿಂದ ದೀರ್ಘಾವಧಿಯ ವೀಸಾದ ವ್ಯವಸ್ಥೆ ಜಾರಿಯಾಗಲಿದೆ ಎಂದು ಸರಕಾರ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News