ಮ್ಯಾನ್ಮಾರ್: ಸೇನಾಡಳಿತದಿಂದ ಕನಿಷ್ಟ 2000 ಪ್ರಜೆಗಳ ಹತ್ಯೆ; ವಿಶ್ವಸಂಸ್ಥೆ

Update: 2022-06-23 18:05 GMT

ಯಾಂಗಾಂಗ್, ಜೂ.24: ಕಳೆದ ವರ್ಷ ಕ್ಷಿಪ್ರಕ್ರಾಂತಿಯ ಮೂಲಕ ಅಧಿಕಾರ ಕೈವಶ ಮಾಡಿಕೊಂಡಿರುವ ಮ್ಯಾನ್ಮಾರ್ ನ ಸೇನೆ, ತನ್ನ ವಿರೋಧಿಗಳನ್ನು ದಮನಿಸುವ ಕಾರ್ಯ ಮುಂದುವರಿಸಿದ್ದು ಈ ಕಾರ್ಯಾಚರಣೆಯಲ್ಲಿ ಇದುವರೆಗೆ 2000ಕ್ಕೂ ಅಧಿಕ ಮಂದಿ ಹತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ತಜ್ಞರು ಹೇಳಿದ್ದಾರೆ. ಮ್ಯಾನ್ಮಾರ್ ಸೇನೆಯ ಕಾರ್ಯಾಚರಣೆಗೆ ತಡೆಯೊಡ್ಡುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಮುದಾಯ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದವರು ಹೇಳಿದ್ದಾರೆ. 

ಮ್ಯಾನ್ಮಾರ್ ನ ಸೇನಾಡಳಿತ 2,000ಕ್ಕೂ ಅಧಿಕ ನಾಗರಿಕರನ್ನು ಹತ್ಯೆಗೈದಿದ್ದು 14,000ಕ್ಕೂ ಅಧಿಕ ಜನರನ್ನು ಬಂಧಿಸಿದೆ. ಇದರಿಂದ 7 ಲಕ್ಷಕ್ಕೂ ಅಧಿಕ ಜನರು ನೆಲೆಕಳೆದುಕೊಂಡಿದ್ದಾರೆ. ದೇಶದ ಒಳಗೆ ಸ್ಥಳಾಂತರಗೊಂಡವರ ಸಂಖ್ಯೆ 1 ಮಿಲಿಯನ್ಗೂ ಅಧಿಕ. ಈ ಕ್ರಮಗಳು ದೇಶವನ್ನು ಆರ್ಥಿಕ ಮತ್ತು ಮಾನವೀಯ ದುರಂತದ ಅಂಚಿಗೆ ತಂದಿರಿಸಿದ್ದು ಮಿಲಿಯಾಂತರ ಜನರ ಬದುಕು ಅತಂತ್ರಸ್ಥಿತಿಯಲ್ಲಿದೆ ಎಂದು ಮ್ಯಾನ್ಮಾರ್ನಲ್ಲಿನ ಪರಿಸ್ಥಿತಿಯ ಕುರಿತ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಟಾಮ್ ಆ್ಯಂಡ್ರೂ ಹೇಳಿದ್ದಾರೆ.

ಮ್ಯಾನ್ಮಾರ್ ನ ಜನರ ಮೇಲೆ ಸೇನಾಡಳಿತದ ದಾಳಿ ಮಾನವೀಯತೆಯ ವಿರುದ್ಧದ ಅಪರಾದ ಹಾಗೂ ಯುದ್ಧಾಪರಾಧಕ್ಕೆ ಸಮವಾಗಿದ್ದು, ಸೇನೆಯ ಹಿಂಸಾಚಾರದ ಪರಿಣಾಮ ಎಲ್ಲರ ಮೇಲೂ ಆಗಿದೆ ಎಂದವರು ಹೇಳಿದ್ದಾರೆ. ಮ್ಯಾನ್ಮಾರ್ ಬಿಕ್ಕಟ್ಟಿನ ವಿಷಯದಲ್ಲಿ ಪ್ರಬಲ ನಿರ್ಣಯ ಅಂಗೀಕರಿಸುವಂತೆ ಆಸಿಯಾನ್ ಸಂಘಟನೆಯ ಮೇಲೆ ಒತ್ತಡ ಹೇರುವ ಮಲೇಶ್ಯಾದ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಟಾಮ್ ಆ್ಯಂಡ್ರೂ ಹೇಳಿದ್ದಾರೆ.

ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾದ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರ ವಶಪಡಿಸಿಕೊಂಡ ಬಳಿಕ ಕಳೆದೊಂದು ವರ್ಷದಿಂದ ಮ್ಯಾನ್ಮಾರ್ನ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯ ಬಗ್ಗೆ ಅಂತರಾಷ್ಟ್ರೀಯ ಸಮುದಾಯ ಇದುವರೆಗೆ ಧ್ವನಿ ಎತ್ತಿಲ್ಲ. ಅಧಿಕಾರ ಕೈವಶ ಮಾಡಿಕೊಳ್ಳುವುದಕ್ಕಿಂತ ಮೊದಲೂ ಮ್ಯಾನ್ಮಾರ್ ಸೇನೆಯು ನಾಗರಿಕರ ವಿರುದ್ಧದ ದೌರ್ಜನ್ಯಕ್ಕೆ ಕುಖ್ಯಾತಿ ಪಡೆದಿತ್ತು. ಬಹುತೇಕ ಮುಸ್ಲಿಂ ರೊಹಿಂಗ್ಯಾಗಳ ಮೇಲೆ 2017ರ ಕ್ರೂರ ಜನಾಂಗೀಯ ದಾಳಿ ಇದಕ್ಕೆ ಒಂದು ನಿದರ್ಶನ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News