ಮಹಿಳೆಗೆ ಹಲ್ಲೆಯ ಹಿನ್ನೆಲೆ: ಚೀನಾ ನಗರಕ್ಕೆ ನೀಡಿದ್ದ ʼಸುಸಂಸ್ಕೃತʼ ಸ್ಥಾನಮಾನ ರದ್ದು

Update: 2022-06-24 15:05 GMT
Photo From Video Twitter/@badiucao

ಬೀಜಿಂಗ್, ಜೂ.24: ಇತ್ತೀಚಿಗೆ ಚೀನಾದ ತಾಂಗ್ಷನ್ ನಗರದಲ್ಲಿ ಪುರುಷರ ಗುಂಪೊಂದು 4 ಮಹಿಳೆಯರ ಮೇಲೆ ಅಮಾನುಷ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ, ನಗರಕ್ಕೆ ನೀಡಲಾಗಿದ್ದ ‘ಸುಸಂಸ್ಕೃತ ನಗರ’ದ ಸ್ಥಾನಮಾನವನ್ನು ಹಿಂಪಡೆಯಲಾಗಿದೆ ಎಂದು ವರದಿಯಾಗಿದೆ.

ನಗರದ ರೆಸ್ಟಾರೆಂಟ್ನಲ್ಲಿ ಜೂನ್ 10ರಂದು ಈ ಘಟನೆ ನಡೆದಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ‌

ರೆಸ್ಟಾರೆಂಟ್ನಿಂದ ಹೊರಬರುತ್ತಿದ್ದ ಮಹಿಳೆಯೊಬ್ಬಳ ಬಳಿ ವ್ಯಕ್ತಿಯೊಬ್ಬ ಅನುಚಿತವಾಗಿ ನಡೆದುಕೊಂಡಾಗ ಆಕೆ ವಿರೋಧಿಸಿದ್ದಳು. ಆಗ ಆತ ಮಹಿಳೆಯ ತಲೆಕೂದಲು ಹಿಡಿದು ಆಕೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದ. ಮಹಿಳೆಯ ಜತೆಗಿದ್ದ ಇತರ ಮೂವರು ಮಹಿಳೆಯರ ಮೇಲೆ ಆ ವ್ಯಕ್ತಿಯ ಜತೆಗಿದ್ದ ಪುರುಷರು ಹಲ್ಲೆ ನಡೆಸಿ ಬಳಿಕ ರಸ್ತೆಯ ಬದಿ ಎಸೆದು ತೆರಳಿದ್ದರು. ತೀವ್ರ ಗಾಯಗೊಂಡ ಇಬ್ಬರು ಮಹಿಳೆಯರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು ಘಟನೆಗೆ ಸಂಬಂಧಿಸಿ 9 ಮಂದಿಯನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಈ ಘಟನೆಯು ಮಹಿಳೆಯರ ಸುರಕ್ಷತೆಯ ಬಗ್ಗೆ ದೇಶದಾದ್ಯಂತ ಚರ್ಚೆ ಮತ್ತು ಖಂಡನೆಗೆ ಕಾರಣವಾಗಿತ್ತು.
 
ಇದರಿಂದ ಎಚ್ಚೆತ್ತ ಕೇಂದ್ರೀಯ ಕಮ್ಯುನಿಸ್ಟ್ ಪಕ್ಷದ ಸಮಿತಿಯ ನಾಗರೀಕತೆ ವಿಭಾಗವು ತಾನು ಈ ಹಿಂದೆ ಸುಸಂಸ್ಕೃತ ನಗರಗಳ ರಾಷ್ಟ್ರೀಯ ಪಟ್ಟಿಯಲ್ಲಿ ತಾಂಗ್ಷನ್ ನಗರಕ್ಕೆ ನೀಡಿದ್ದ ಗೌರವವನ್ನು ರದ್ದು ಮಾಡಿರುವುದಾಗಿ ಪ್ರಕಟಿಸಿದೆ. 2011ರಿಂದ 2020ರವರೆಗೆ 4 ವರ್ಷ ಈ ಗೌರವವಕ್ಕೆ ತಾಂಗ್ಷನ್ ನಗರ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News