ಅಫ್ಘಾನ್ ಭೂಕಂಪದಲ್ಲಿ ಬದುಕುಳಿದವರಿಗೆ ಆಹಾರ, ಆಶ್ರಯದ ಕೊರತೆ: ವರದಿ

Update: 2022-06-24 16:29 GMT

ಕಾಬೂಲ್, ಜೂ.24: ಎರಡು ದಶಕಗಳಲ್ಲೇ ಅತ್ಯಂತ ವಿನಾಶಕಾರಿ ಭೂಕಂಪದ ಹೊಡೆತಕ್ಕೆ ತತ್ತರಿಸಿರುವ ಅಫ್ಘಾನಿಸ್ತಾನದ ದುರ್ಗಮ ಹಳ್ಳಿಗಳ ಜನತೆ ಅಸಹಾಯಕರಾಗಿ ಆಹಾರ, ಆಶ್ರಯದ ನೆರವಿಗಾಗಿ ಎದುರು ನೋಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ

ಬುಧವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ 1000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 10,000ಕ್ಕೂ ಅಧಿಕ ಮನೆಗಳು ನಾಶವಾಗಿದೆ. ಇದರ ಜತೆಗೆ ಸುರಿದ ನಿರಂತರ ಮಳೆಯಿಂದಾದ ಪ್ರವಾಹವು ಹಲವೆಡೆ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ. ರಸ್ತೆಯ ಮೂಲಕ ನೆರವು ಒದಗಿಸುವುದು ಕಷ್ಟಸಾಧ್ಯವಾಗಿರುವುದರಿಂದ ನೆರವು ವಿತರಣೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್ತಿದೆ ಎಂದು ಅಲ್ ಜಝೀರಾದ ವರದಿಗಾರರು ಹೇಳಿದ್ದಾರೆ.

 ದೂರದ ಪರ್ವತದ ತಪ್ಪಲಿನ ಹಳ್ಳಿಗಳಲ್ಲಿ ಸಿಕ್ಕಿಬಿದ್ದಿರುವ ಜನರಿಗೆ ಆಹಾರ ಒದಗಿಸಲು ಕಂದಹಾರ್ ಮತ್ತು ಕಾಬೂಲ್ನಿಂದ ಹೆಲಿಕಾಪ್ಟರ್ಗಳನ್ನು ರವಾನಿಸಲಾಗಿದೆ. ಆದರೆ ಸಾಕಷ್ಟು ಹೆಲಿಕಾಪ್ಟರ್ ಲಭ್ಯವಾಗದೆ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ.

ಅತ್ಯಂತ ಹೆಚ್ಚು ನಾಶನಷ್ಟ ಪಾಕ್ತಿಕಾ ಪ್ರಾಂತದಲ್ಲಿ ಸಂಭವಿಸಿದ್ದು ಇಲ್ಲಿ ಮನೆ, ಮಸೀದಿ, ಶಾಲೆ ಎಲ್ಲವೂ ನೆಲಸಮವಾಗಿದೆ. ಗಾಯಗೊಂಡವರನ್ನು ಬಿಟ್ಟು ಬೇರೇನೂ ಉಳಿದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಈ ಪ್ರಾಂತದಲ್ಲಿ ಕನಿಷ್ಟ 2000 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ಕುಸಿದು ಬಿದ್ದ ಮನೆ, ಕಟ್ಟಡಗಳ ಅವಶೇಷಗಳಡಿಯಿಂದ ಬದುಕುಳಿದವರ ಶೋಧ ಕಾರ್ಯಾಚರಣೆ ಅಂತ್ಯವಾಗಿದೆ ಎಂದು ತಾಲಿಬಾನ್ ಘೋಷಿದೆ. ಅಫ್ಘಾನ್ ಜನತೆಗೆ ತಕ್ಷಣ ಸಮಗ್ರ ನೆರವು ಒದಗಿಸುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅಫ್ಘಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಖಹರ್ ಬಾಲ್ಖಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿನ ಏಜೆನ್ಸಿ ಯುಎನ್ಎಚ್ಸಿಆರ್ ಟೆಂಟ್ಗಳು, ಕಂಬಳಿಗಳು ಹಾಗೂ ಪ್ಲಾಸ್ಟಿಕ್ ಶೀಟ್ಗಳನ್ನು ಒದಗಿಸಿದೆ. ವಿಶ್ವ ಆಹಾರ ಯೋಜನೆಯು ಪಾಕ್ತಿಕಾ ಪ್ರಾಂತದ ಸುಮಾರು 14,000 ಜನರಿಗೆ ಆಹಾರದ ಪ್ಯಾಕೆಟ್ ಒದಗಿಸಿದೆ. ವಿಶ್ವ ಆರೋಗ್ಯ ಸಂಘಟನೆಯು 10 ಟನ್ ವೈದ್ಯಕೀಯ ಸಲಕರಣೆ ಒದಗಿಸಿದೆ.

ಆದರೆ, ಸಂತ್ರಸ್ತರಿಗೆ ಮಾನವೀಯ ನೆರವು ಒದಗಿಸುವ ವಿಶ್ವಸಂಸ್ಥೆಯ ಉಪಕ್ರಮಗಳಿಗೆ ತಾಲಿಬಾನ್ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಧ್ಯಪ್ರವೇಶಿಸಿ ನೆರವು ವಿತರಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ ಗುರುವಾರ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳು ತಮಗೆ ಬೇಕಿರುವ ಫಲಾನುಭವಿಗಳ ಪಟ್ಟಿ ಸಿದ್ಧಮಾಡಿಟ್ಟುಕೊಂಡು ವಿಶ್ವಸಂಸ್ಥೆಯ ಕಾರ್ಯಕರ್ತರಿಗೆ ನೀಡುತ್ತಿದ್ದು ನೆರವು ವಿತರಣೆ ಪಾರದರ್ಶಕ ರೀತಿಯಲ್ಲಿ ನಡೆಯುವುದಕ್ಕೆ ಅಡ್ಡಿಯಾಗಿದ್ದಾರೆ. ನೆರವು ವಿತರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕಳೆದ ಸೆಪ್ಟಂಬರ್ನಲ್ಲಿ ವಿಶ್ವಸಂಸ್ಥೆಗೆ ನೀಡಿದ್ದ ವಾಗ್ದಾನವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಗ್ರಿಫಿತ್ ಹೇಳಿದ್ದಾರೆ.
 ಈ ಮಧ್ಯೆ, ಭೂಕಂಪ ಸಂತ್ರಸ್ತ ಪ್ರದೇಶಗಳಲ್ಲಿ ಕಾಲರಾ ರೋಗ ಕಾಣಿಸಿಕೊಂಡಿರುವ ಮಾಹಿತಿ ಲಭಿಸಿದ್ದು ಇದನ್ನು ನಿಯಂತ್ರಿಸುವ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ವಿಶ್ವಸಂಸ್ಥೆ ಮಾನವೀಯ ನೆರವಿನ ವಿಭಾಗ(ಒಸಿಎಚ್ಎ) ಗುರುವಾರ ಹೇಳಿದೆ. ಭೂಕಂಪ 1,18,000ಕ್ಕೂ ಅಧಿಕ ಮಕ್ಕಳ ಮೇಲೆ ಪರಿಣಾಮ ಬೀರಿದೆ . ಹಲವು ಮಕ್ಕಳು ಶುದ್ಧ ಕುಡಿಯುವ ನೀರು, ಆಹಾರ ಮತ್ತು ಸುರಕ್ಷಿತ ವಾಸಸ್ಥಳದ ನಿರೀಕ್ಷೆಯಲ್ಲಿದ್ದಾರೆ ಎಂದು ‘ಸೇವ್ ದಿ ಚಿಲ್ಡ್ರನ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News