ಗನ್ ನಿಯಂತ್ರಣ ಮಸೂದೆ ಅಂಗೀಕರಿಸಿದ ಅಮೆರಿಕದ ಸೆನೆಟ್

Update: 2022-06-24 17:35 GMT

ವಾಷಿಂಗ್ಟನ್, ಜೂ.24: ದೇಶದಲ್ಲಿ ಹೆಚ್ಚುತ್ತಿರುವ ಗನ್ ಹಿಂಸಾಚಾರಕ್ಕೆ ಕಡಿವಾಣ ಹಾಕುವಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಅಮೆರಿಕದ ಸೆನೆಟರ್ಗಳು ಗನ್ ನಿಯಂತ್ರಣ ಮಸೂದೆಯನ್ನು ಅಂಗೀಕರಿಸುವ ಜತೆಗೆ, ಮಾನಸಿಕ ಆರೋಗ್ಯ ಮತ್ತು ಶಾಲಾ ಭದ್ರತೆ ನಿಧಿಗೆ ಶತಕೋಟಿ ಡಾಲರ್ ಅನುದಾನ ನೀಡುವ ಪ್ರಸ್ತಾವನೆಯನ್ನೂ ಅಂಗೀಕರಿಸಿದ್ದಾರೆ ಎಂದು ವರದಿಯಾಗಿದೆ.

ದ್ವಿಪಕ್ಷೀಯ ಸುರಕ್ಷಿತ ಸಮುದಾಯಗಳ ಕಾಯ್ದೆಗೆ ಎಲ್ಲಾ 50 ಡೆಮೊಕ್ರಟಿಕ್ ಸೆನೆಟರ್ಗಳು ಹಾಗೂ 15 ರಿಪಬ್ಲಿಕನ್ ಸೆನೆಟರ್ಗಳ ಬೆಂಬಲ ದೊರಕಿದೆ. 21 ವರ್ಷದ ಒಳಗಿನವರು ಗನ್ ಖರೀದಿಸುವಾಗ ಅವರ ಹಿನ್ನೆಲೆಯನ್ನು ಪರಿಶೀಲಿಸುವುದು, ಮಾನಸಿಕ ಆರೋಗ್ಯಕ್ಕೆ 11 ಬಿಲಿಯನ್ ಡಾಲರ್, ಶಾಲೆಯಲ್ಲಿ ಭದ್ರತೆ ಹೆಚ್ಚಿಸಲು 2 ಬಿಲಿಯನ್ ಡಾಲರ್ ನಿಧಿ ಒದಗಿಸುವ ಪ್ರಸ್ತಾವನೆಯನ್ನು ಈ ಕಾಯ್ದೆ ಒಳಗೊಂಡಿದೆ. ಗನ್ ನಿಯಂತ್ರಣ ಕಾಯ್ದೆಯ ಬಗ್ಗೆ ಸುಮಾರು 30 ವರ್ಷಗಳಿಂದ ಆಗ್ರಹ ಕೇಳಿ ಬರುತ್ತಿತ್ತು.

  ಬೆದರಿಕೆ ಎಂದು ಪರಿಗಣಿಸಲ್ಪಟ್ಟ ಜನರಿಂದ ಬಂದೂಕುಗಳನ್ನು ವಶಪಡಿಸಿಕೊಳ್ಳಲು ‘ರೆಡ್ ಫ್ಲ್ಯಾಗ್’ ಕಾನೂನು ಜಾರಿಗೊಳಿಸುವಂತೆ ರಾಜ್ಯಗಳನ್ನು ಪ್ರೇರೇಪಿಸಲು ಇದು ಹಣವನ್ನು ಒದಗಿಸುತ್ತದೆ. ಜತೆಗೆ, ಇದುವರೆಗಿನ ಕಾನೂನಿನಲ್ಲಿದ್ದ ‘ಬಾಯ್‌ಫ್ರೆಂಡ್’ ಲೋಪದೋಷವನ್ನು ಮುಚ್ಚಿಹಾಕಿದೆ.

ಈ ದಿನ ಅಮೆರಿಕದ ಸೆನೆಟ್, ಅಸಾಧ್ಯ ಎಂದು ಕೆಲ ವಾರಗಳ ಹಿಂದಿನವರೆಗೂ ಹಲವರು ಭಾವಿಸುತ್ತಿದ್ದ ಕಾರ್ಯವನ್ನು ಸಾಧ್ಯಮಾಡಿ ತೋರಿಸಿದೆ. ಸುಮಾರು 30 ವರ್ಷಗಳಲ್ಲೇ ನಾವು ಪ್ರಪ್ರಥಮ ಗಮನಾರ್ಹ ಗನ್ ಸುರಕ್ಷತಾ ಕಾಯ್ದೆಯನ್ನು ಅಂಗೀಕರಿಸುತ್ತಿದ್ದೇವೆ. ಈ ಮಸೂದೆಯನ್ನು ಉಭಯ ಪಕ್ಷೀಯ, ಸಾಮಾನ್ಯ ಜ್ಞಾನ ಮತ್ತು ಜೀವರಕ್ಷಕ ಎಂಬ 3 ವಿಶೇಷಣಗಳೊಂದಿಗೆ ವಿವರಿಸಬಹುದು ಎಂದು ಸೆನೆಟ್ ನ ಡೆಮೊಕ್ರಾಟಿಕ್ ಮುಖಂಡ ಚುಕ್ ಶುಮರ್ ಹೇಳಿದ್ದಾರೆ.

ಇದೊಂದು ಚಾರಿತ್ರಿಕ ದಿನವಾಗಿದೆ. ಇದು ಮೂರು ದಶಕಗಳಲ್ಲಿ ಕಾಂಗ್ರೆಸ್ ಅಂಗೀಕರಿಸಿದ ಬಂದೂಕು ಹಿಂಸಾಚಾರ ವಿರೋಧಿ ಶಾಸನದ ಅತ್ಯಂತ ಮಹತ್ವದ ಭಾಗವಾಗಲಿದೆ ಎಂದು ಸೆನೆಟರ್ ಕ್ರಿಸ್ ಮರ್ಫಿ ಬಣ್ಣಿಸಿದ್ದಾರೆ.

ನ್ಯಾಷನಲ್ ರೈಫಲ್ ಅಸೋಸಿಯೇಷನ್ ಹಾಗೂ ಹಲವು ರಿಪಬ್ಲಿಕನರು ಮಸೂದೆಯನ್ನು ವಿರೋಧಿಸಿದರು. ಆದರೆ ಪೊಲೀಸರ ಕ್ರಮ, ಕೌಟುಂಬಿಕ ಹಿಂಸಾಚಾರ ಮತ್ತು ಮಾನಸಿಕ ಅಸ್ವಸ್ಥತೆಯ ವಿಷಯಕ್ಕೆ ಸಂಬಂಧಿಸಿ ಕೆಲಸ ಮಾಡುವ ವಕಾಲತ್ತು ಗುಂಪುಗಳು ಇದನ್ನು ಅನುಮೋದಿಸಿವೆ. ಆಕ್ರಮಣಕಾರಿ ರೈಫಲ್ಗಳ ಮೇಲಿನ ನಿಷೇಧಗಳ ಮರುಸ್ಥಾಪನೆ ಸೇರಿದಂತೆ ಹೆಚ್ಚು ಗಣನೀಯ ಸುಧಾರಣೆಗಳನ್ನು ಅಮೆರಿಕ ಅಧ್ಯಕ್ಷ ಬೈಡನ್ ಬಯಸಿದ್ದರು. ಆದರೆ ಆಡಳಿತ ಮತ್ತು ವಿರೋಧ ಪಕ್ಷಗಳ ಸಮಾನ 50-50 ಬಲವಿರುವ ಸೆನೆಟ್ನಲ್ಲಿ ಮಸೂದೆ ಅಂಗೀಕಾರವಾಗಲು 60 ಮತಗಳ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News